ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ : ಮೀರಾಬಾಯಿಗೆ ಚಿನ್ನದ ಸಂಭ್ರಮ

0
561

ಬೆನ್ನುನೋವಿನಿಂದಾಗಿ ಆರು ತಿಂಗಳಿಗೂ ಹೆಚ್ಚು ಕಾಲ ಕಣದಿಂದ ದೂರ ಉಳಿದಿದ್ದ ವಿಶ್ವ ಚಾಂಪಿಯನ್ ಸಾಯಿಕೋಮ್‌ ಮೀರಾಬಾಯಿ ಚಾನು, ಗುರುವಾರ ಚಿನ್ನದ ಸಂಭ್ರಮದಲ್ಲಿ ಮಿಂದರು.

ನವದೆಹಲಿ (ಪಿಟಿಐ): ಬೆನ್ನುನೋವಿನಿಂದಾಗಿ ಆರು ತಿಂಗಳಿಗೂ ಹೆಚ್ಚು ಕಾಲ ಕಣದಿಂದ ದೂರ ಉಳಿದಿದ್ದ ವಿಶ್ವ ಚಾಂಪಿಯನ್ ಸಾಯಿಕೋಮ್‌ ಮೀರಾಬಾಯಿ ಚಾನು, ಗುರುವಾರ ಚಿನ್ನದ ಸಂಭ್ರಮದಲ್ಲಿ ಮಿಂದರು.

ಥಾಯ್ಲೆಂಡ್‌ನಲ್ಲಿ ನಡೆಯುತ್ತಿರುವ ಇಜಿಎಟಿ ಕಪ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ 48 ಕೆಜಿ ವಿಭಾಗದಲ್ಲಿ ಚಾನು ಈ ಸಾಧನೆ ಮಾಡಿದರು. ಅವರು ಒಟ್ಟು 192 ಕೆ.ಜಿ ಭಾರ ಎತ್ತಿದರು. 
ಇದು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ‘ಬಿ’ ದರ್ಜೆಯ ಸ್ಪರ್ಧೆ ಆಗಿರುವುದರಿಂದ ಅವರು ಗೆದ್ದ ಪದಕ ಮಹತ್ವದ್ದಾಗಿದೆ.

24 ವರ್ಷದ, ಮಣಿಪುರ ನಿವಾಸಿ ಮೀರಾಬಾಯಿ ಸ್ನ್ಯಾಚ್‌ನಲ್ಲಿ 82 ಮತ್ತು ಕ್ಲೀನ್‌ ಆ್ಯಂಡ್ ಜರ್ಕ್‌ನಲ್ಲಿ 110 ಕೆಜಿ ಸಾಧನೆ ಮಾಡಿದರು.

ಒಲಿಂಪಿಕ್ಸ್ ಅರ್ಹತೆಯ ‘ಎ’ ದರ್ಜೆಯ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಳೆದ ಬಾರಿ ಅವರಿಗೆ ಪಾಲ್ಗೊಳ್ಳಲು ಆಗಲಿಲ್ಲ. ಜಕಾರ್ತದಲ್ಲಿ ನಡೆದಿದ್ದ ಏಷ್ಯಾ ಕ್ರೀಡಾಕೂಟದಲ್ಲೂ ಪಾಲ್ಗೊಂಡಿರಲಿಲ್ಲ. ನೋವು ಕಾಡುವ ಮುನ್ನ ಅವರು ಕೊನೆಯದಾಗಿ ಪಾಲ್ಗೊಂಡದ್ದು ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಕೂಟದಲ್ಲಿ.

ಅಲ್ಲಿ ಅವರು 196 ಕೆ.ಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಸ್ನ್ಯಾಚ್‌ನಲ್ಲಿ 86 ಮತ್ತು ಕ್ಲೀನ್‌ ಆ್ಯಂಡ್ ಜರ್ಕ್‌ನಲ್ಲಿ 110 ಕೆ.ಜಿ ಭಾರ ಎತ್ತಿ ಕೂಟ ದಾಖಲೆ ನಿರ್ಮಿಸಿದ್ದರು.

ಗುರುವಾರದ ಸ್ಪರ್ಧೆಯಲ್ಲಿ ಜಪಾನ್‌ನ ಮಿಯಾಕೆ ಹಿರೋಮಿ ಬೆಳ್ಳಿ ಪದಕ ಗೆದ್ದರೆ, ಕಂಚಿನ ಪದಕವು ಪಪುವಾ ನ್ಯೂ ಗಿನಿಯ ಲೋ ದಿಕಾ ತೌ ಅವರ ಪಾಲಾಯಿತು. ಇವರು ಕ್ರಮವಾಗಿ 183 ಕೆ.ಜಿ ಮತ್ತು 179 ಕೆ.ಜಿ ಭಾರ ಎತ್ತಿದರು.