ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಕಂಚಿನ ಪದಕಗಳಿಗೆ ತೃಪ್ತಿಪಟ್ಟ ಮೇರಿ, ಜಮುನಾ, ಲವ್ಲಿನಾ

0
11

ಈ ಬಾರಿ 51 ಕೆ.ಜಿ.ವಿಭಾಗದಲ್ಲಿ ಕಣಕ್ಕಿಳಿದಿದ್ದ ಮೇರಿ ಕೋಮ್ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಲವ್ಲಿನಾ ಬೊರ್ಗೊಹೈನ್‌ ಮತ್ತು ಜಮುನಾ ಬೊರೊ ಅವರೂ ಕಂಚಿನ ಪದಕಗಳನ್ನು ಪಡೆದರು.

ಉಲಾನ್‌ ಉಡೆ, ರಷ್ಯಾ (ಪಿಟಿಐ): ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ  51 ಕೆ.ಜಿ.ವಿಭಾಗದಲ್ಲಿ ಕಣಕ್ಕಿಳಿದಿದ್ದ ಮೇರಿ ಕೋಮ್ ಸೆಮಿಫೈನಲ್‌ನಲ್ಲಿ 1–4 ಪಾಯಿಂಟ್ಸ್‌ನಿಂದ ಟರ್ಕಿಯ ಎರಡನೇ ಶ್ರೇಯಾಂಕದ ಬಾಕ್ಸರ್‌ ಬುಸೆನಜ್‌ ಕಕಿರೊಗ್ಲು ಎದುರು ಸೋಲುವ ಮೂಲಕ  ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

36 ವರ್ಷ ವಯಸ್ಸಿನ ಮೇರಿ, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 8 ಪದಕಗಳನ್ನು ಗೆದ್ದು (6 ಚಿನ್ನ, ತಲಾ ಒಂದು ಬೆಳ್ಳಿ ಮತ್ತು ಕಂಚು) ಈ ಸಾಧನೆ ಮಾಡಿದ ವಿಶ್ವದ ಏಕೈಕ ಬಾಕ್ಸರ್‌ ಎಂಬ ದಾಖಲೆ ನಿರ್ಮಿಸಿದ್ದಾರೆ.

ಬೊರೊ, ಲವ್ಲಿನಾಗೆ ಕಂಚು: 54 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಜಮುನಾ ಬೊರೊ 0–5 ಪಾಯಿಂಟ್ಸ್‌ನಿಂದ ಚೀನಾ ತೈಪೆಯ ಹುವಾಂಗ್‌ ಹಿಸಿಯಾವೊ ವೆನ್‌ ಎದುರು ಸೋತರು. ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಹುವಾಂಗ್‌, ಚಾಂಪಿಯನ್‌ಷಿಪ್‌ನಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು. 

‘ಸೆಮಿಫೈನಲ್‌ನಲ್ಲಿ ಹಲವು ತಪ್ಪುಗಳನ್ನು ಮಾಡಿದೆ. ಹೀಗಾಗಿ ಸೋಲು ಎದುರಾಯಿತು. ಮುಂದೆ ಈ ತಪ್ಪುಗಳು ಆಗದಂತೆ ಎಚ್ಚರವಹಿಸುತ್ತೇನೆ. ಇಲ್ಲಿ ಕಂಚಿನ ಪದಕ ಗೆದ್ದಿದ್ದು ಖುಷಿ ನೀಡಿದೆ’ ಎಂದು ಜಮುನಾ ತಿಳಿಸಿದ್ದಾರೆ.

69 ಕೆ.ಜಿ.ವಿಭಾಗದ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಲವ್ಲಿನಾ ಬೊರ್ಗೊಹೈನ್‌ 2–3 ಪಾಯಿಂಟ್ಸ್‌ನಿಂದ ಚೀನಾದ ಯಾಂಗ್‌ ಲಿಯು ಎದುರು ಮಣಿಯುವ ಮೂಲಕ  ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಭಾರತದ ಮಂಜು ರಾಣಿ ಫೈನಲ್ ಗೆ: 48 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಭಾರತದ ಮಂಜು ರಾಣಿ , ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿ ದಾಖಲೆ ನಿರ್ಮಿಸಿದ್ದಾರೆ. ಚೊಚ್ಚಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲೇ ಅಂತಿಮ ಘಟ್ಟ ತಲುಪಿದ ಭಾರತದ ಎರಡನೇ ಬಾಕ್ಸರ್‌ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಎಂ.ಸಿ. ಮೇರಿ ಕೋಮ್‌  (2001ರಲ್ಲಿ) ಮೊದಲು ಈ ಸಾಧನೆ ಮಾಡಿದ್ದರು.