ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಭಾರತದ ಅಮಿತ್ ಪಂಘಲ್‌ ಚಾರಿತ್ರಿಕ ಸಾಧನೆ, ಮನೀಷ್‌ ಕೌಶಿಕ್‌ಗೆ ಕಂಚಿನ ಪದಕ

0
10

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಅಮಿತ್‌ ಪಂಘಲ್‌, ಸೆಪ್ಟೆಂಬರ್ 20 ರ ಶುಕ್ರವಾರ ಇಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.ಈ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ ಅವರು ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್‌ ಎಂಬ ದಾಖಲೆ ಬರೆದರು.

ಏಕ್ತರಿನ್‌ಬರ್ಗ್‌, ರಷ್ಯಾ (ಪಿಟಿಐ): ಭಾರತದ ಅಮಿತ್‌ ಪಂಘಲ್‌, ಸೆಪ್ಟೆಂಬರ್ 20 ರ ಶುಕ್ರವಾರ ಇಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು.ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿದ ಅವರು ಪುರುಷರ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಬಾಕ್ಸರ್‌ ಎಂಬ ದಾಖಲೆ ಬರೆದರು.

63 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಮನೀಷ್‌ ಕೌಶಿಕ್‌ ಅವರು ಕಂಚಿನ ಪದಕ ಪಡೆದರು.

52 ಕೆ.ಜಿ.ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಅಮಿತ್‌ 3–2 ಪಾಯಿಂಟ್ಸ್‌ನಿಂದ ಕಜಕಸ್ತಾನದ ಸಕೇನ್‌ ಬಿಬೊಸ್ಸಿನೊವ್‌ ಅವರನ್ನು ಪರಾಭವಗೊಳಿಸಿದರು.

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿರುವ ಅಮಿತ್‌, ಸೆಪ್ಟೆಂಬರ್ 21 ರ  ಶನಿವಾರ ನಡೆಯುವ ಚಿನ್ನದ ಪದಕದ ಹೋರಾಟದಲ್ಲಿ ಉಜ್ಬೇಕಿಸ್ತಾನದ ಶಕೋಬಿದಿನ್‌ ಜೊಯಿರೊವ್ ಎದುರು ಸೆಣಸಲಿದ್ದಾರೆ.

ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಜೊಯಿರೊವ್, ನಾಲ್ಕರ ಘಟ್ಟದ ಇನ್ನೊಂದು ಪಂದ್ಯದಲ್ಲಿ ಫ್ರಾನ್ಸ್‌ನ ಬಿಲ್ಲಾಲ್‌ ಬೆನ್ನಾಮ ಎದುರು ಗೆದ್ದರು.

ಅಮಿತ್‌ ಅವರು ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡಿದರು. ತನಗಿಂತಲೂ ತುಸು ಎತ್ತರವಿದ್ದ ಎದುರಾಳಿಯ ಮುಖ ಮತ್ತು ದವಡೆಗೆ ಶಕ್ತಿಯುತ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಗಳಿಸಿದರು. ಬಿಬೊಸ್ಸಿನೊವ್‌ ಅವರು ಆಕ್ರಮಣಕ್ಕೆ ಒತ್ತು ನೀಡಿದಾಗ ಭಾರತದ ಆಟಗಾರ ರಕ್ಷಣಾ ತಂತ್ರ ಅನುಸರಿಸಿದರು. ಪ್ರತಿ ಸಲವೂ ಹಿಂದಕ್ಕೆ ಬಾಗಿ ಎದುರಾಳಿಯ ಪಂಚ್‌ಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.

‘ಬಿಬೊಸ್ಸಿನೊವ್‌ ಅವರು ಕಠಿಣ ಪೈಪೋಟಿ ಒಡ್ಡಿದರು. ಅವರ ಸವಾಲು ಮೀರಿ ನಿಂತಿದ್ದು ಖುಷಿ ನೀಡಿದೆ. ಫೈನಲ್‌ ಪ್ರವೇಶಿಸಿರುವುದು ಭಾರತದ ಬಾಕ್ಸಿಂಗ್‌ನ ಮಟ್ಟಿಗೆ ಬಹುದೊಡ್ಡ ಸಾಧನೆ. ಹೀಗಾಗಿ ಹೆಮ್ಮೆಯ ಭಾವ ಮೂಡಿದೆ’ ಎಂದು ಪಂಘಲ್‌ ಖುಷಿ ವ್ಯಕ್ತಪಡಿಸಿದ್ದಾರೆ.

2017ರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು (49 ಕೆ.ಜಿ.) ಬಾಕ್ಸಿಂಗ್‌ ಲೋಕದ ಗಮನ ಸೆಳೆದಿದ್ದ ಪಂಘಲ್‌, ಅದೇ ವರ್ಷ ವಿಶ್ವ ಚಾಂಪಿಯನ್‌ಷಿಪ್‌ಗೆ ಪದಾರ್ಪಣೆ ಮಾಡಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದರು.

ಬಲ್ಗೇರಿಯಾದಲ್ಲಿ ನಡೆದಿದ್ದ ಸ್ಟ್ರಾಂಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯಲ್ಲೂ ಚಿನ್ನದ ಪದಕಗಳನ್ನು ಜಯಿಸಿದ್ದ ಅಮಿತ್‌, ಹೋದ ವರ್ಷ ನಡೆದಿದ್ದ ಏಷ್ಯನ್‌ ಕ್ರೀಡಾಕೂಟದಲ್ಲೂ ಚಿನ್ನದ ಸಾಧನೆ ಮಾಡಿದ್ದರು.

ಸೆಮಿಯಲ್ಲಿ ಎಡವಿದ ಮನೀಷ್‌: 63 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಮನೀಷ್‌ 0–5 ಪಾಯಿಂಟ್ಸ್‌ನಿಂದ ಕ್ಯೂಬಾದ ಅಗ್ರಶ್ರೇಯಾಂಕದ ಬಾಕ್ಸರ್‌ ಆ್ಯಂಡಿ ಗೋಮೆಜ್‌ ಕ್ರೂಜ್‌ ಎದುರು ಸೋತರು.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಜಯಿಸಿದ್ದ ಕೌಶಿಕ್‌, ಮೂರು ಸುತ್ತುಗಳ ಸೆಮಿಫೈನಲ್‌ ನಲ್ಲಿ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಲು ವಿಫಲರಾದರು.