ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಭಾರತಕ್ಕೆ 140ನೇ ಸ್ಥಾನ

0
337

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನ ಕೆಳಗಿಳಿದಿದ್ದು 140ನೇ ರ‍್ಯಾಂಕ್‌ನಲ್ಲಿದೆ.

ಲಂಡನ್ (ಪಿಟಿಐ): ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನ ಕೆಳಗಿಳಿದಿದ್ದು 140ನೇ ರ‍್ಯಾಂಕ್‌ನಲ್ಲಿದೆ. 

ಪ್ಯಾರಿಸ್ ಮೂಲದ ‘ಗಡಿಗಳ ಕಟ್ಟುಪಾಡಿಲ್ಲದ ವರದಿಗಾರರು’ (ಆರ್‌ಎಸ್‌ಎಫ್) ಎನ್‌ಜಿಒ ಬಿಡುಗಡೆ ಮಾಡಿರುವ ‘ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2019’ ಪಟ್ಟಿಯಲ್ಲಿ ನಾರ್ವೆ ಪ್ರಥಮ ಸ್ಥಾನದಲ್ಲಿದೆ. ಫಿನ್ ಲ್ಯಾಂಡ್ 2 ನೇ ಸ್ಥಾನ, ಸ್ವೀಡನ್ 3 ನೇ ಸ್ಥಾನ, ನೆದರ್ ಲ್ಯಾಂಡ್ 4 ನೇ ಸ್ಥಾನ, ಡೆನ್ಮಾರ್ಕ್ 5 ನೇ ಸ್ಥಾನವನ್ನು ಪಡೆದಿದೆ.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ 142, ಬಾಂಗ್ಲಾದೇಶ 150ನೇ ಸ್ಥಾನ ಗಳಿಸಿವೆ. ‘2018ರಲ್ಲಿ ಭಾರತದಲ್ಲಿ ಆರು ಪತ್ರಕರ್ತರನ್ನು ವೃತ್ತಿಗೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಪ್ರಾದೇಶಿಕ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಇರುವ ಅಪಾಯಗಳನ್ನು ಈ ಘಟನೆಗಳು ಎತ್ತಿತೋರಿಸುತ್ತಿವೆ’ ಎಂದು ವರದಿ ಹೇಳಿದೆ. 

‘ಪತ್ರಕರ್ತರು ನಿರ್ಭೀತರಾಗಿ ಕಾರ್ಯನಿರ್ವಹಿಸಲು ಅವಕಾಶವಿರುವ ರಾಷ್ಟ್ರಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆಡಳಿತಶಾಹಿ ವ್ಯವಸ್ಥೆ ಮಾಧ್ಯಮಗಳ ಮೇಲೆ ಹಿಡಿತ ಹೆಚ್ಚಿಸುತ್ತಲೇ ಇದೆ’ ಎಂದು ಉಲ್ಲೇಖಿಸಲಾಗಿದೆ.