ವಿಶ್ವ ಚಾಂಪಿಯನ್ ಜರ್ಮನಿಗೆ ಮುಖಭಂಗ!

0
15

ದೇಶದ ವೈಭವದ 80 ವರ್ಷಗಳ ವಿಶ್ವಕಪ್ ಫುಟ್​ಬಾಲ್ ಇತಿಹಾಸದಲ್ಲಿ ಜರ್ಮನಿ ತಂಡ ಮೊದಲ ಬಾರಿಗೆ ಲೀಗ್ ಹಂತದಲ್ಲಿಯೇ ನಿರ್ಗಮನ ಕಂಡ ಅವಮಾನ ಎದುರಿಸಿದೆ.

ಕಜಾನ್/ಯೆಕೆಟರೇನ್​ಬರ್ಗ್: ದೇಶದ ವೈಭವದ 80 ವರ್ಷಗಳ ವಿಶ್ವಕಪ್ ಫುಟ್​ಬಾಲ್ ಇತಿಹಾಸದಲ್ಲಿ ಜರ್ಮನಿ ತಂಡ ಮೊದಲ ಬಾರಿಗೆ ಲೀಗ್ ಹಂತದಲ್ಲಿಯೇ ನಿರ್ಗಮನ ಕಂಡ ಅವಮಾನ ಎದುರಿಸಿದೆ. ಮೆಕ್ಸಿಕೊ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲು ಕಂಡರೂ, ಹಾಲಿ ಚಾಂಪಿಯನ್ ಜರ್ಮನಿ ತಂಡದಲ್ಲಿ ಭರವಸೆಯ ಆಟಗಾರರಿದ್ದ ಕಾರಣ ವಿಶ್ವಕಪ್​ನ ಅಂತಿಮ 16ರ ಘಟ್ಟಕ್ಕೇರುವ ನಿರೀಕ್ಷೆ ಇತ್ತು. ಆದರೆ, ಅಂತಿಮ ಲೀಗ್ ಪಂದ್ಯದಲ್ಲಿ ಜರ್ಮನ್​ನ ಫುಟ್​ಬಾಲ್ ಶಕ್ತಿಗೆ ಆಸುಪಾಸಿನಲ್ಲೂ ನಿಲ್ಲದ ಏಷ್ಯನ್ ಟೀಮ್ ದಕ್ಷಿಣ ಕೊರಿಯಾ ವಿರುದ್ಧ ಸೋಲು ಕಂಡು ಟ್ರೋಫಿ ಉಳಿಸಿಕೊಳ್ಳುವ ಅಭಿಯಾನವನ್ನು ಕೊನೆಗೊಳಿಸಿದೆ.

ಜರ್ಮನಿ ತಂಡದ ಸೋಲಿ ನೊಂದಿಗೆ, ಎಫ್ ಗುಂಪಿನಿಂದ ಸ್ವೀಡನ್ ಹಾಗೂ ಮೆಕ್ಸಿಕೊ ತಂಡಗಳು 16ರ ಘಟ್ಟಕ್ಕೆ ಅರ್ಹತೆ ಪಡೆದವು. ಯೆಕೆಟರೇನ್​ಬರ್ಗ್​ನಲ್ಲಿ ನಡೆದ ಪಂದ್ಯದಲ್ಲಿ ಮೆಕ್ಸಿಕೊ ತಂಡವನ್ನು ದೊಡ್ಡ ಅಂತರದಿಂದ ಸೋಲಿಸಿದ ಸ್ವೀಡನ್ ಅಗ್ರಸ್ಥಾನಿಯಾಗಿ ಮುನ್ನಡೆದರೆ, ಜರ್ಮನಿ ಒಂದು ಗೋಲು ಬಾರಿಸಿದಲ್ಲಿ ಹೊರಬೀಳುವ ಅಪಾಯ ಎದುರಿಸಿದ್ದ ಮೆಕ್ಸಿಕೊ 2ನೇ ಸ್ಥಾನಿಯಾಗಿ ಮುನ್ನಡೆಯಿತು. ಮೆಕ್ಸಿಕೊ ಸತತ 7ನೇ ವಿಶ್ವಕಪ್​ನಲ್ಲಿ ನಾಕೌಟ್ ಹಂತಕ್ಕೇರುವಲ್ಲಿ ಯಶಸ್ವಿಯಾಯಿತು.

ಜೂನ್ 28 ರಂದು ಕಜಾನ್ ಅರೇನಾದಲ್ಲಿ ನಡೆದ ನಡೆದ ಪಂದ್ಯದಲ್ಲಿ ಇಂಜುರಿ ಟೈಮ್ಲ್ಲಿ ಸಿಡಿಸಿದ ಎರಡು ಗೋಲುಗಳ ನೆರವಿನಿಂದ ದಕ್ಷಿಣ ಕೊರಿಯಾ 2-0 ಗೋಲುಗಳಿಂದ ಜರ್ಮನಿ ತಂಡವನ್ನು ಸೋಲಿಸಿತು. ಕಿಮ್ ಯಾಂಗ್ ವಾನ್ (90+3ನೇ ನಿಮಿಷ) ಬಾರಿಸಿದ ಶಾಟ್​ಅನ್ನು ರೆಫ್ರಿ ವಿಎಆರ್ ಪರಿಶೀಲನೆ ಮೂಲಕ ಮಾನ್ಯ ಮಾಡಿದರೆ, ಸನ್ ಹಿಯಾಂಗ್ ಮಿನ್ (90+6ನೇ ನಿಮಿಷ) ಗೋಲ್ಕೀಪರ್ ಇಲ್ಲದ ಜರ್ಮನಿಯ ಖಾಲಿ ಗೋಲುಪೆಟ್ಟಿಗೆಗೆ ಚೆಂಡನ್ನು ಸೇರಿಸಿ ತಂಡದ ಅವಿಸ್ಮರಣೀಯ ಗೆಲುವಿಗೆ ಕಾರಣರಾದರು.

ಜರ್ಮನಿ ಪಾಲಿಗೆ ರಷ್ಯಾ ವಿಶ್ವಕಪ್ ಕೆಟ್ಟ ನೆನಪಾಗಿ ಉಳಿಯಲು ಹಲವು ಕಾರಣಗಳನ್ನು ಅಂತಿಮ ಪಂದ್ಯ ನೀಡಿತು. ಕೊರಿಯಾ 2ನೇ ಗೋಲು ಬಾರಿಸಿದ ವೇಳೆ ಜರ್ಮನಿ ಗೋಲುಪೆಟ್ಟಿಗೆ ಖಾಲಿಯಾಗಿ ಉಳಿದಿತ್ತು. ಇಡೀ ಟೂರ್ನಿಯಲ್ಲಿ ಜರ್ಮನಿ ಕೇವಲ ಎರಡು ಗೋಲನ್ನು ಬಾರಿಸಿ ಹೊರನಡೆಯಿತು. ಮೆಕ್ಸಿಕೊ ವಿರುದ್ಧದ ಪಂದ್ಯದಲ್ಲಿ ಸ್ವೀಡನ್ ಕಾಣುವ ಫಲಿತಾಂಶಕ್ಕೆ ಸಮನಾದ ಫಲಿತಾಂಶವನ್ನು ಕಾಣುವ ಗುರಿಯಲ್ಲಿ ಜೋಕಿಮ್ ಲೋವ್ ಮಾರ್ಗದರ್ಶನದ ಜರ್ಮನಿ ತಂಡ ಕಣಕ್ಕಿಳಿದಿತ್ತು. ಆದರೆ, ದಕ್ಷಿಣ ಕೊರಿಯಾದ ರಕ್ಷಣಾ ವಿಭಾಗ ಜರ್ಮನಿಗೆ ಒಂದಿಂಚೂ ಅವಕಾಶ ನೀಡದೆ ಬೆವರಿಳಿಸಿತು.

ದ. ಕೊರಿಯಾದ ಸ್ಮರಣೀಯ ಜಯ

ಏಷ್ಯಾದ ಫುಟ್​ಬಾಲ್ ಶಕ್ತಿಕೇಂದ್ರಗಳಲ್ಲಿ ಒಂದಾದ ದಕ್ಷಿಣ ಕೊರಿಯಾ ಪಾಲಿಗೂ ಈ ಗೆಲುವು ಅವಿಸ್ಮರಣೀಯ. 90 ನಿಮಿಷಗಳ ಕಾಲ ಜರ್ಮನಿಯ ಮಹಾಬಲಿಷ್ಠ ಫಾರ್ವರ್ಡ್ ವಿಭಾಗವನ್ನು ಕಟ್ಟಿಹಾಕಿದ ದಕ್ಷಿಣ ಕೊರಿಯಾ, ವಿಶ್ವ ಚಾಂಪಿಯನ್ ತಂಡವನ್ನು ಸೋಲಿಸಿದ ಮೊದಲ ಏಷ್ಯನ್ ತಂಡ ಎನ್ನುವ ಗೌರವ ಪಡೆದಿದೆ.

6ನೇ ಬಾರಿ ಹಾಲಿ ಚಾಂಪಿಯನ್ಸ್ ಔಟ್!

ವಿಶ್ವಕಪ್ ಇತಿಹಾಸದಲ್ಲಿ ಈವರೆಗೂ ಆರು ಬಾರಿ ಮಾತ್ರವೇ ಹಾಲಿ ಚಾಂಪಿಯನ್ ತಂಡ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದೆ. ಈ ಶತಮಾನದಲ್ಲಿ 4ನೇ ಬಾರಿ ಈ ರೀತಿ ನಡೆದಿದೆ. 2002ರ ಚಾಂಪಿಯನ್ ಬ್ರೆಜಿಲ್ ಮಾತ್ರವೇ 2006ರ ವಿಶ್ವಕಪ್​ನಲ್ಲಿ ಗುಂಪು ಹಂತವನ್ನು ದಾಟಿತ್ತು. ಯುರೋಪ್ ಫುಟ್​ಬಾಲ್ ದೈತ್ಯ ತಂಡಗಳೆನಿಸಿದ ಫ್ರಾನ್ಸ್ (2002), ಇಟಲಿ (2010), ಸ್ಪೇನ್ (2014) ಮತ್ತು ಈಗ ಜರ್ಮನಿ ಹಾಲಿ ಚಾಂಪಿಯನ್ ಆಗಿ ಆಡಿದ ವಿಶ್ವಕಪ್​ನಲ್ಲಿ ಗುಂಪು ಹಂತದಲ್ಲಿಯೇ ಗಂಟುಮೂಟೆ ಕಟ್ಟಿದೆ.