ವಿಶ್ವ ಚಾಂಪಿಯನ್‌ಷಿಪ್‌ : ಪೂಜಾ ಧಂಡಾ ಹಾಗೂ ನವಜೋತ್‌ ಕೌರ್‌ಗೆ ಸ್ಥಾನ

0
24

ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಲು ವಿಫಲರಾಗಿರುವ ಪೂಜಾ ಧಂಡಾ ಮತ್ತು ನವಜೋತ್ ಕೌರ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನವದೆಹಲಿ (ಪಿಟಿಐ): ಒಲಿಂಪಿಕ್ ಕೂಟಕ್ಕೆ ಅರ್ಹತೆ ಗಳಿಸಲು ವಿಫಲರಾಗಿರುವ ಪೂಜಾ ಧಂಡಾ ಮತ್ತು ನವಜೋತ್ ಕೌರ್ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಲಖನೌದಲ್ಲಿ ಆಗಸ್ಟ್ 19 ರ ಸೋಮವಾರ ನಡೆದ ಅಯ್ಕೆ ಪ್ರಕ್ರಿಯೆಯಲ್ಲಿ ಇವರಿಬ್ಬರಿಗೆ ಎದುರಾಳಿಗಳೇ ಇರಲಿಲ್ಲ. ಹೀಗಾಗಿ ಮ್ಯಾಟ್‌ ಪ್ರವೇಶಿಸದೇ ಇವರು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವವರ ಪಟ್ಟಿಯಲ್ಲಿ ಸ್ಥಾನ ಗಳಿಸಿದರು. 

ಪೂಜಾ 59 ಕೆಜಿ ವಿಭಾಗದಲ್ಲೂ ನವಜೋತ್‌ 65 ಕೆಜಿ ವಿಭಾಗದಲ್ಲೂ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾದರು.

ಅಶಿಸ್ತು ತೋರಿದ 25 ಕುಸ್ತಿಪಟುಗಳ ಮೇಲೆ ಭಾರತ ಕುಸ್ತಿ ಫೆಡರೇಷನ್ ನಿಷೇಧ ಹೇರಿದೆ. ಪೂಜಾ ಮತ್ತು ನವಜೋತ್ ವಿರುದ್ಧ ಸ್ಪರ್ಧಿಸಬೇಕಾಗಿದ್ದವರು ಈ ಪಟ್ಟಿಯಲ್ಲಿದ್ದಾರೆ.

ಭಾರತ ಕ್ರೀಡಾ ಪ್ರಾಧಿಕಾರದ ಲಖನೌ ಕೇಂದ್ರದಲ್ಲಿ ನಡೆದಿದ್ದ ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಂಡಿದ್ದ 45 ಮಂದಿ ಪೈಕಿ 25 ಮಂದಿ ಅನುಮತಿ ಪಡೆಯದೇ ಹೊರಗೆ ಹೋಗಿದ್ದರು. ಹೀಗಾಗಿ ನಿಷೇಧಕ್ಕೆ ಒಳಗಾಗಿದ್ದರು. ಈಗಾಗಲೇ ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಸಾಕ್ಷಿ ಮಲಿಕ್‌, ಸೀಮಾ ಬಿಸ್ಲಾ ಮತ್ತು ಕಿರಣ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಒಲಿಂಪಿಕ್‌ ಅರ್ಹತಾ ಸುತ್ತಿನಲ್ಲಿ 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಪೂಜಾ ಧಂಡ ಎದುರಾಳಿ ಸರಿತಾ ಮೋರ್‌ ವಿರುದ್ಧ ಸೋತಿದ್ದರು.

ಕಳೆದ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಂಚಿನ ಪದಕ ಗೆದ್ದಿದ್ದರು. ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದಿದ್ದ ನವಜೋತ್‌ ಅವರು ಒಲಿಂಪಿಕ್‌ ಅರ್ಹತಾ ಸ್ಪರ್ಧೆಯಲ್ಲಿ (68 ಕೆಜಿ) ದಿವ್ಯಾ ಕಕ್ರಾನ್ ಎದುರು ಸೋತಿದ್ದರು.

ಮೊದಲು ಬೈ; ನಂತರ ಗೆಲುವು: ಸೋಮವಾರ 55 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಲಲಿತಾ ಮೊದಲ ಸುತ್ತಿನಲ್ಲಿ ಬೈ ಪಡೆದರು. ನಂತರ ಮೀನಾಕ್ಷಿ ಎದುರು 9–1ರಲ್ಲಿ ಗೆದ್ದರು. ಮೊದಲ ಸುತ್ತಿನಲ್ಲಿ ಮೀನಾಕ್ಷಿ 5–0ಯಿಂದ ಕಿರಣ್ ಅವರನ್ನು ಮಣಿಸಿದ್ದರು. 72 ಕೆಜಿ ವಿಭಾಗದಲ್ಲಿ ನಿಕ್ಕಿ ವಿರುದ್ಧ 3–2ರಲ್ಲಿ ಕೋಮಲ್ ಗೆಲುವು ಸಾಧಿಸಿದರು.

ವಿಶ್ವ ಚಾಂಪಿಯನ್‌ಶಿಪ್‌ ಸೆ. 14ರಿಂದ 22ರ ವರೆಗೆ ಕಜಕಸ್ತಾನದ ನೂರ್ ಸುಲ್ತಾನ್‌ನಲ್ಲಿ ನಡೆಯಲಿದೆ. ಇದಕ್ಕೆ ಆಯ್ಕೆಯಾದ ಕುಸ್ತಿಪಟುಗಳೆಂದರೆ:  ಸೀಮಾ ಬಿಸ್ಲಾ (50 ಕೆಜಿ), ವಿನೇಶ್‌ ಪೋಗಟ್‌ (53 ಕೆಜಿ), ಲಲಿತಾ (55 ಕೆಜಿ), ಸರಿತಾ ಮೋರ್‌ (57 ಕೆಜಿ), ಪೂಜಾ ಧಂಡಾ (59 ಕೆಜಿ), ಸಾಕ್ಷಿ ಮಲಿಕ್‌ (62 ಕೆಜಿ), ನವಜೋತ್‌ ಕೌರ್‌ (65 ಕೆಜಿ), ದಿವ್ಯಾ ಕಾಕ್ರನ್‌ (68 ಕೆಜಿ), ಕೋಮಲ್‌ (72 ಕೆಜಿ) ಮತ್ತು ಕಿರಣ್‌ (76 ಕೆಜಿ).