ವಿಶ್ವ ಚಾಂಪಿಯನ್‌ಶಿಪ್‌ಗೆ ಸುಶೀಲ್ ಕುಮಾರ್‌ ಅರ್ಹತೆ

0
13

ಒಲಿಂಪಿಕ್ಸ್ ‍ಪದಕ ವಿಜೇತ ಸುಶೀಲ್‌ ಕುಮಾರ್‌ ವಿಶ್ವಚಾಂಪಿಯನ್‌ಷಿಪ್‌ ಕುಸ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ (ಪಿಟಿಐ): ಒಲಿಂಪಿಕ್ಸ್ ‍ಪದಕ ವಿಜೇತ ಸುಶೀಲ್‌ ಕುಮಾರ್‌ ವಿಶ್ವಚಾಂಪಿಯನ್‌ಷಿಪ್‌ ಕುಸ್ತಿಗೆ ಅರ್ಹತೆ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಗಸ್ಟ್ 20 ರ ಮಂಗಳವಾರ ನಡೆದ 74 ಕೆಜಿ ವಿಭಾಗದ ಆಯ್ಕೆ ಟ್ರಯಲ್ಸ್‌ನಲ್ಲಿ ಜಿತೇಂದರ್‌ ಕುಮಾರ್‌ ಅವರನ್ನು 4–2ರಿಂದ ಸೋಲಿಸಿದರು. ಬೌಟ್‌ ವಿವಾದಕ್ಕೂ ಕಾರಣವಾಯಿತು. 

ಇವರಿಬ್ಬರ ನಡುವಣ ಫೈನಲ್‌ ಬೌಟ್‌ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು 1500 ಜನರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿತ್ತು. ಮೊದಲ ಅವಧಿಯಲ್ಲಿ ಸುಶೀಲ್‌ಗೆ 4–0 ಮುನ್ನಡೆ ಲಭಿಸಿತು. ಎರಡನೇ ಅವಧಿಯ ಆರಂಭದಲ್ಲಿ ಜಿತೇಂದರ್‌ ಕಣ್ಣಿಗೆ ಪೆಟ್ಟಾಗಿ ಪಂದ್ಯ ಸ್ಥಗಿತಗೊಂಡಿತ್ತು. ಸುಶೀಲ್‌ ಕೂಡಲೇ ಕ್ಷಮೆ ಕೋರಿದರು.

ಸುಶೀಲ್‌ ಅವರ ಮತ್ತೊಂದು ಆಕ್ರಮಣಕಾರಿ ನಡೆಯು ಜಿತೇಂದರ್‌ ಮೊಣಕಾಲಿಗೆ ಗಾಯ ಮಾಡಿತು. ಎದೆ ಗುಂದದ ಜೀತೆಂದರ್‌, ಮೂರು ಬಾರಿ ಸುಶೀಲ್‌ ಕುಮಾರ್‌ ಅವರ ಬಲಗಾಲನ್ನು ಭದ್ರವಾಗಿ ಹಿಡಿದಿದ್ದರು. ಆದರೆ ಹಿಡಿತ ಸೂಕ್ತವಲ್ಲದ ಕಾರಣ ಅವರಿಗೆ ಪಾಯಿಂಟ್‌ ಲಭಿಸಲಿಲ್ಲ. ಈ ವೇಳೆ ತಾಪದಿಂದ ಬಳಲಿದ ಸುಶೀಲ್‌ ಅವರು ಎರಡು ಬಾರಿ ವೈದ್ಯಕೀಯ ವಿರಾಮ ತೆಗೆದುಕೊಂಡು ಸುಧಾರಿಸಿಕೊಂಡರು.

ಎರಡು ಪುಷ್‌ ಔಟ್‌ ಪಾಯಿಂಟ್‌ ಗಳಿಸಿದ ಜೀತೆಂದರ್‌ ಸೋಲಿನ ಅಂತರ ವನ್ನು ತಗ್ಗಿಸಿಕೊಂಡರು.

ಇಲ್ಲಿ ಸೋತ ಜಿತೇಂದರ್‌ಗೆ ಭಾರತ ಕುಸ್ತಿ ಒಕ್ಕೂಟ ಇನ್ನೊಂದು ಅವಕಾಶ ನೀಡಿದೆ. 79 ಕೆಜಿ ವಿಭಾಗದ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಿ ಅವರು ವಿಶ್ವ ಚಾಂಪಿಯನ್‌ಷಿಪ್‌ ಟಿಕೆಟ್‌ ‍ಪಡೆಯಬಹುದಾಗಿದೆ.