ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಬಜರಂಗ್‌, ರವಿಕುಮಾರ್‌ ದಹಿಯಾಗೆ ಕಂಚು

0
14

ಭಾರತದ ಬಜರಂಗ್‌ ಪುನಿಯಾ ಮತ್ತು ರವಿಕುಮಾರ್‌ ದಹಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ನೂರ್‌ ಸುಲ್ತಾನ್‌, ಕಜಕಸ್ತಾನ (ಪಿಟಿಐ): ಭಾರತದ ಬಜರಂಗ್‌ ಪುನಿಯಾ ಮತ್ತು ರವಿಕುಮಾರ್‌ ದಹಿಯಾ ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕಗಳನ್ನು ಜಯಿಸಿದ್ದಾರೆ.

ಸೆಪ್ಟೆಂಬರ್ 20 ರ ಶುಕ್ರವಾರ ನಡೆದ 65 ಕೆ.ಜಿ.ಫ್ರೀಸ್ಟೈಲ್‌ ವಿಭಾಗದ ಕಂಚಿನ ಪದಕದ ಪೈಪೋಟಿಯಲ್ಲಿ ಬಜರಂಗ್‌ 8–7 ಪಾಯಿಂಟ್ಸ್‌ನಿಂದ ಮಂಗೋಲಿಯಾದ ತುಲ್ಗಾ ತುಮುರ್‌ ಒಚಿರ್‌ ವಿರುದ್ಧ ಗೆದ್ದರು.

ಈ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರನೇ ಪದಕ ಗೆದ್ದ ಸಾಧನೆಯನ್ನೂ ಮಾಡಿದರು. 2013ರಲ್ಲಿ ಕಂಚು ಜಯಿಸಿದ್ದ ಅವರು ಹೋದ ವರ್ಷ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು.

23 ವರ್ಷದೊಳಗಿನವರ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಒಚಿರ್‌, ಆರಂಭದಲ್ಲಿ ಮೇಲುಗೈ ಸಾಧಿಸಿದರು. ಮೊದಲ ಅವಧಿಯಲ್ಲಿ ಭಾರತದ ಪೈಲ್ವಾನನನ್ನು ಮ್ಯಾಟ್‌ನಿಂದ ಆಚೆ ಎತ್ತಿ ಹಾಕಿದ ಅವರು ಬಿಗಿ ಪಟ್ಟುಗಳನ್ನೂ ಹಾಕಿ ಗಮನ ಸೆಳೆದರು. ಈ ಮೂಲಕ 6–0 ಮುನ್ನಡೆಯನ್ನೂ ಗಳಿಸಿದರು.

ಎರಡನೇ ಅವಧಿಯಲ್ಲಿ ಬಜರಂಗ್‌ ಆಧಿಪತ್ಯ ಸಾಧಿಸಿದರು. ಎದುರಾಳಿಯ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಅವರು ಜಾಣ್ಮೆಯ ನಡೆಗಳನ್ನು ಅನುಸರಿಸಿ 8–7 ಮುನ್ನಡೆ ಪಡೆದರು. ಈ ಮೂಲಕ ಕಂಚಿನ ಪದಕ ಖಚಿತಪಡಿಸಿಕೊಂಡರು.

‘ಸೆಮಿಫೈನಲ್‌ನಲ್ಲಿ ನನಗೆ ಮೋಸ ಮಾಡಿದರು. ಇದರಿಂದ ತುಂಬಾ ಬೇಸರವಾಗಿತ್ತು. ಕಂಚಿನ ಪದಕದ ಪೈಪೋಟಿಯಿಂದ ಹಿಂದೆ ಸರಿದುಬಿಡಬೇಕೆಂದು ತೀರ್ಮಾನಿಸಿದ್ದೆ. ಕೋಚ್‌ ಮನವೊಲಿಸಿದ ಬಳಿಕ ನಿರ್ಧಾರ ಬದಲಿಸಿದೆ. ನನಗೆ ಆಗಿರುವ ಅನ್ಯಾಯದ ಬಗ್ಗೆ ಯುಡಬ್ಲ್ಯುಡಬ್ಲ್ಯುಗೆ ದೂರು ನೀಡುತ್ತೇನೆ’ ಎಂದು ಬಜರಂಗ್‌ ಹೇಳಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸಲ ಭಾಗವಹಿಸಿದ್ದ  ರವಿಕುಮಾರ್‌ ದಹಿಯಾ 57 ಕೆ.ಜಿ.ಫ್ರೀಸ್ಟೈಲ್‌ ವಿಭಾಗದ ಕಂಚಿನ ಪದಕದ ಪೈಪೋಟಿಯಲ್ಲಿ 6–3 ಪಾಯಿಂಟ್ಸ್‌ನಿಂದ ಇರಾನ್‌ನ ರೀಜಾ ನಗರಚಿಗೆ ಆಘಾತ ನೀಡಿದರು.

ರೀಜಾ ಅವರು ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಸುಶೀಲ್‌ಗೆ ನಿರಾಸೆ: ಒಲಿಂಪಿಕ್ಸ್‌ನಲ್ಲಿ ಎರಡು ಪದಕಗಳನ್ನು ಗೆದ್ದಿರುವ ಕುಸ್ತಿಪಟು ಸುಶೀಲ್‌ ಕುಮಾರ್‌ ಮೊದಲ ಸುತ್ತಿನಲ್ಲೇ ನಿರಾಸೆ ಕಂಡರು.

ಸುಶೀಲ್‌ ಅವರು ಎಂಟು ವರ್ಷಗಳ ನಂತರ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದರು.

74 ಕೆ.ಜಿ.ವಿಭಾಗದ ಪೈಪೋಟಿಯಲ್ಲಿ ಅಜರ್‌ಬೈಜಾನ್‌ನ ಖಾದಜಿಮುರಾದ್‌ ಗಾದಜಿಯೆವ್‌ 11–9ರಿಂದ ಭಾರತದ ಪೈಲ್ವಾನನನ್ನು ಮಣಿಸಿದರು. 9–4 ರಿಂದ ಮುನ್ನಡೆ ಗಳಿಸಿದ್ದ ಸುಶೀಲ್‌, ಎದುರಾಳಿಗೆ ಸತತ ಏಳು ಪಾಯಿಂಟ್ಸ್‌ ಬಿಟ್ಟುಕೊಟ್ಟು ಕೈ ಸುಟ್ಟುಕೊಂಡರು.