ವಿಶ್ವ ಕುಸ್ತಿ ಚಾಂಪಿಯನ್​ಷಿಪ್​ನಲ್ಲಿ ಭಾರತದ ದೀಪಕ್​ ಪೂನಿಯಾಗೆ ಬೆಳ್ಳಿ: ಮೊಣಕಾಲು ಗಾಯದಿಂದ ಫೈನಲ್​ನಿಂದ ನಿವೃತ್ತಿ

0
9

ಇಲ್ಲಿ ನಡೆಯುತ್ತಿರುವ ಕುಸ್ತಿ ವಿಶ್ವಚಾಂಪಿಯನ್​ಷಿಪ್​ನ 86 ಕೆ.ಜಿ. ದೇಹತೂಕ ವಿಭಾಗದಲ್ಲಿ ಫೈನಲ್​ ಸೆಣಸಾಟದಿಂದ ದೀಪಕ್​ ಪೂನಿಯಾ ಹಿಂದೆ ಸರಿದಿದ್ದಾರೆ. ಮೊಣಕಾಲಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಅವರು ಫೈನಲ್​ ಪಂದ್ಯವನ್ನು ಬಿಟ್ಟುಕೊಟ್ಟು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ನರ್​ ಸುಲ್ತಾನ್​ (ಕಜಕಸ್ತಾನ) ಇಲ್ಲಿ ನಡೆಯುತ್ತಿರುವ ಕುಸ್ತಿ ವಿಶ್ವಚಾಂಪಿಯನ್​ಷಿಪ್​ನ 86 ಕೆ.ಜಿ. ದೇಹತೂಕ ವಿಭಾಗದಲ್ಲಿ ಫೈನಲ್​ ಸೆಣಸಾಟದಿಂದ ದೀಪಕ್​ ಪೂನಿಯಾ ಹಿಂದೆ ಸರಿದಿದ್ದಾರೆ. ಮೊಣಕಾಲಿಗೆ ಗಾಯವಾಗಿರುವ ಹಿನ್ನೆಲೆಯಲ್ಲಿ ಅವರು ಫೈನಲ್​ ಪಂದ್ಯವನ್ನು ಬಿಟ್ಟುಕೊಟ್ಟು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಫೈನಲ್​ನಲ್ಲಿ ಅವರು ಇರಾನ್​ನ ಹಸನ್​ ಯಾಜ್ದಾನಿ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಾಡಬೇಕಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೀಪಕ್​ ಪೂನಿಯಾ, ಫೈನಲ್​ ಪಂದ್ಯದಿಂದ ನಿವೃತ್ತಿ ಹೊಂದಬೇಕಾಗಿ ಬಂದಿದ್ದರಿಂದ ಸಹಜವಾಗಿ ನಿರಾಸೆಯಾಗಿದೆ. ಆದರೆ ನನ್ನ ಒಟ್ಟಾರೆ ಪ್ರದರ್ಶನದ ಬಗ್ಗೆ ತೃಪ್ತಿ ಇದೆ. ಒಲಿಂಪಿಕ್ಸ್​ನಲ್ಲಿ ಪದಕ ಸಾಧನೆ ಮಾಡುವ ನಿಟ್ಟಿನಲ್ಲಿ ನನ್ನೆಲ್ಲ ಶ್ರಮ ಹಾಕಿ ತಯಾರಿ ನಡೆಸುತ್ತೇನೆ ಎಂದರು.

ಸ್ವಿಜರ್ಲೆಂಡ್​ನ ಮಲ್ಲ ಸ್ಟೀಫನ್​ ರಿಚ್​ಮತ್​ ಅವರನ್ನು 8-2ರಿಂದ ಮಣಿಸಿ ದೀಪಕ್​ ಪೂನಿಯಾ ಫೈನಲ್​ ತಲುಪಿದ್ದರು. ತನ್ಮೂಲಕ ಅವರು ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಸತತ ಮೂರು ಚಿನ್ನದ ಪದಕ ಸಾಧನೆ ಮಾಡಿದ ಭಾರತದ ಮೊದಲ ಕುಸ್ತಿಪಟು ಎಂಬ ಸಾಧನೆಯ ಅಂಚಿಗೆ ಬಂದು ತಲುಪಿದ್ದರು. ಆದರೆ ಗಾಯದಿಂದಾಗಿ ಕುಸ್ತಿ ವಿಶ್ವಚಾಂಪಿಯನ್​ಷಿಪ್​ನಿಂದ ಹಿಂದೆ ಸರಿದು ಈ ಸಾಧನೆಯಿಂದ ವಂಚಿತರಾದರು.

ಇದಕ್ಕೂ ಮುನ್ನ ಅವರು ಕೆಡಟ್​ ವರ್ಲ್ಡ್​ ಚಾಂಪಿಯನ್​ಷಿಪ್​ ಮತ್ತು ಜೂನಿಯರ್​ ವರ್ಲ್ಡ್​ ಚಾಂಪಿಯನ್​ಷಿಪ್​ಗಳಲ್ಲಿ ತಮ್ಮ ವಿಭಾಗದಲ್ಲಿ ಚಿನ್ನದ ಪದಕ ಸಾಧನೆ ಮಾಡಿದ್ದರು. ಒಲಿಂಪಿಕ್ಸ್​ನಲ್ಲಿ 2 ಪದಕ ಸಾಧನೆ ಮಾಡಿರುವ ಸುಶಿಲ್​ ಕುಮಾರ್​ ನಂತರದಲ್ಲಿ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಸಾಧನೆ ಮಾಡಿದ ಭಾರತದ 2ನೇ ಮಲ್ಲ ಎಂಬ ಹೆಗ್ಗಳಿಕೆಯನ್ನು ಹೊಂದಲು ದೀಪಕ್​ ಪೂನಿಯಾಗೆ ಅವಕಾಶವಿತ್ತು.

ಆದರೂ ಹರಿಯಾಣದ ಜಜ್ಜಾರ್​ ಮೂಲದ ಮಲ್ಲ, ವಿಶ್ವಚಾಂಪಿಯನ್​ಷಿಪ್​ನ ಫೈನಲ್​ ತಲುಪಿದ ಅತಿ ಕಿರಿಯ ಕುಸ್ತಿಪಟು ಎಂಬ ಸಾಧನೆ ಮಾಡಿದರು. ಅಲ್ಲದೆ, ಪ್ರಸ್ತುತ ನಡೆಯುತ್ತಿರುವ ಕುಸ್ತಿ ವಿಶ್ವಚಾಂಪಿಯನ್​ಷಿಪ್​ನಲ್ಲಿ ಕಣದಲ್ಲಿದ್ದ ಇತರೆ ಮಲ್ಲರಿಗೂ ಮಾಡಲಾಗದ ಬೆಳ್ಳಿ ಸಾಧನೆಯನ್ನು ಮಾಡಿದರು. (ಏಜೆನ್ಸೀಸ್​)