ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ವರದಿ : ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತಕ್ಕೆ ಬಡ್ತಿ

0
694

ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಈ ವರ್ಷದ ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 58 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ನವದೆಹಲಿ : ವಿಶ್ವ ಆರ್ಥಿಕ ವೇದಿಕೆ ಪ್ರಕಟಿಸಿರುವ ಈ ವರ್ಷದ(2018) ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಭಾರತ 58 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

2017 ರ ಸ್ಥಾನಕ್ಕೆ ಹೋಲಿಸಿದರೆ ಈ ಬಾರಿ ಭಾರತ 5 ಸ್ಥಾನಕ್ಕೆ ಮೇಲಕ್ಕೆ ಏರಿದೆ. ಜಿ-20 ದೇಶಗಳ ಪೈಕಿ ಭಾರತ ಗರಿಷ್ಠಗಳಿಕೆ ಕಂಡಿದೆ. ವಿಶ್ವ ಆರ್ಥಿಕ ವೇದಿಕೆಯ(ಡಬ್ಲ್ಯುಇ ಎಫ್) ವರದಿಯಲ್ಲಿ ತಿಳಿಸಲಾಗಿದೆ.

140 ದೇಶಗಳ ಪಟ್ಟಿಯಲ್ಲಿ ಅಮೆರಿಕವು ಮೊದಲ ಸ್ಥಾನ, ಸಿಂಗಪುರ ಎರಡನೇ ಸ್ಥಾನ, ಜರ್ಮನಿ ಮೂರನೇ ಸ್ಥಾನ, ಸ್ವಿಟ್ಜರ್ಲೆಂಡ್ ನಾಲ್ಕನೇ ಸ್ಥಾನ ಮತ್ತು ಜಪಾನ್ ಐದನೇ ಸ್ಥಾನದಲ್ಲಿ ಇವೆ.

ಬ್ರಿಕ್ಸ್ ದೇಶಗಳಲ್ಲಿ ಚೀನಾ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ರಷ್ಯಾ, ಭಾರತ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ಗಳಿವೆ. ಭಾರತದ ದಕ್ಷಿಣ ಏಷ್ಯಾದ ಪ್ರಮುಖ ಆರ್ಥಿಕ ಚಾಲಕ ಶಕ್ತಿಯ ಸ್ಥಾನವನ್ನು ಉಳಿಸಿಕೊಂಡಿದೆ.

ಆರೋಗ್ಯ, ಶಿಕ್ಷಣ ಕೌಶಲ್ಯ ಕ್ಷೇತ್ರಗಳನ್ನು ಹೊರತುಪಡಿಸಿ ಸ್ಪರ್ಧಾತ್ಮಕತೆಯ ಎಲ್ಲ ವಿಷಯಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಶ್ರೀಲಂಕಾ ಗರಿಷ್ಠ ಮಟ್ಟದ ಜೀವಿತಾವಧಿ, ಸುಶಿಕ್ಷಿತ ದುಡಿಯುವ ವರ್ಗ ಹೊಂದಿದೆ. ಭಾರತ ಮತ್ತು ಶ್ರೀಲಂಕಾ ಅತ್ಯಂತ ದಕ್ಷ ಸ್ವರೂಪದ ಮೂಲಸೌಕರ್ಯ ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ. ಭಾರತವು ಸಾರಿಗೆ ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸಿದೆ.

ಭಾರತವು ವಿಶಾಲ ಮಾರುಕಟ್ಟೆ ಗಾತ್ರ, ಸಂಶೋಧನಾ ಸಂಸ್ಥೆಗಳ ಗುಣಮಟ್ಟ ಮತ್ತು ವ್ಯವಹಾರ ಕುಶಲತೆ ವಿಷಯದಲ್ಲಿ ಸ್ಪರ್ಧಾತ್ಮಕ ಅನುಕೂಲತೆ ಹೊಂದಿದೆ.

ಭಾರತದಲ್ಲಿ ಕಾರ್ಮಿಕರ ಮಾರುಕಟ್ಟೆ ಅದರಲ್ಲೂ ವಿಶೇಷವಾಗಿ ಕಾರ್ಮಿಕರ ಹಕ್ಕುಗಳು, ಉತ್ಪನ್ನ ಮಾರುಕಟ್ಟೆ, ವಾಣಿಜ್ಯ ದರ ಮತ್ತು ವಿದ್ಯಾರ್ಥಿ- ಶಿಕ್ಷಕ ಅನುಪಾತ ವಿಷಯದಲ್ಲಿ ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ದೇಶವೊಂದರ ಆರ್ಥಿಕತೆಯ ಉತ್ಪಾದನಾ ಮಟ್ಟ ಮತ್ತು ದೀರ್ಘಾವಧಿ ಬೆಳವಣಿಗೆ ಪರಿಗಣಿಸಿ ಸ್ಪರ್ಧಾತ್ಮಕತೆ ನಿರ್ಧರಿಸಲಾಗುತ್ತಿದೆ. ಮೂಲಸೌಕರ್ಯ, ತಂತ್ರಜ್ಞಾನ ಸನ್ನದ್ಧತೆ, ಆರೋಗ್ಯ, ಶಿಕ್ಷಣ, ಹಣಕಾಸು ವ್ಯವಸ್ಥೆ, ಮಾರುಕಟ್ಟೆಯ ಗಾತ್ರ ಮತ್ತು ಸಂಶೋಧನೆಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.