ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ : ಭಾರತಕ್ಕೆ ಕಂಚು

0
39

ಆರಂಭಿಕ ಪತನದಿಂದ ಚೇತರಿಸಿಕೊಂಡ ಭಾರತ ಮಹಿಳಾ ತಂಡದವರು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಜ್ಯೋತಿ ಸುರೇಖಾ ವೆಣ್ಣಮ್, ಮುಸ್ಕಾನ್ ಕಿರಾರ್ ಮತ್ತು ರಾಜ್ ಕೌರ್ ಅವರನ್ನು ಒಳಗೊಂಡ ತಂಡ ಶನಿವಾರ ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಟರ್ಕಿಯನ್ನು 229–226ರಿಂದ ಮಣಿಸಿದರು.

ಡೆನ್ ಬಾಷ್, ನೆದರ್ಲೆಂಡ್ಸ್‌ (ಪಿಟಿಐ): ಆರಂಭಿಕ ಪತನದಿಂದ ಚೇತರಿಸಿಕೊಂಡ ಭಾರತ ಮಹಿಳಾ ತಂಡದವರು ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಕಾಂಪೌಂಡ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ಜ್ಯೋತಿ ಸುರೇಖಾ ವೆಣ್ಣಮ್, ಮುಸ್ಕಾನ್ ಕಿರಾರ್ ಮತ್ತು ರಾಜ್ ಕೌರ್ ಅವರನ್ನು ಒಳಗೊಂಡ ತಂಡ ಜೂನ್ 15 ರ ಶನಿವಾರ ಮೂರನೇ ಸ್ಥಾನಕ್ಕಾಗಿ ನಡೆದ ಹಣಾಹಣಿಯಲ್ಲಿ ಟರ್ಕಿಯನ್ನು 229–226ರಿಂದ ಮಣಿಸಿದರು.

ಭಾರತ ತಂಡದ ಆರಂಭ ಉತ್ತಮವಾಗಿರಲಿಲ್ಲ. ಹೀಗಾಗಿ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಈ ಸಂದರ್ಭದಲ್ಲಿ ಜ್ಯೋತಿ ಸುರೇಖಾ ಅಮೋಘ ಸಾಮರ್ಥ್ಯ ತೋರಿದರು. ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಅನುಭವಿ ಬಿಲ್ಗಾರ್ತಿ ಜ್ಯೋತಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಆರಂಭದಲ್ಲಿ ಟರ್ಕಿ ಬಿಲ್ಗಾರ್ತಿ ಯರು ಮುನ್ನಡೆ ಸಾಧಿಸಿದರು. ಯೆಸಿಮ್, ಗಿಜೆಮ್ ಎಲ್ಮಗಲಿ ಮತ್ತು ಇಪೆಕ್ ತೊಮ್ರುಕ್ ನಿಖರ ಗುರಿ ಇಟ್ಟು 57–55 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನಲ್ಲಿ ಟರ್ಕಿ ಗುರಿ ತಪ್ಪಿತು. ಇದರ ಲಾಭ ಪಡೆದುಕೊಂಡ ಭಾರತದ ಬಿಲ್ಗಾರ್ತಿಯರು 58–53 ಪಾಯಿಂಟ್ ಗಳಿಸಿ ಅಲ್ಪ ಮುನ್ನಡೆ ಸಾಧಿಸಿದರು. 

ಆದರೆ ಮುಂದಿನ ಸುತ್ತಿನಲ್ಲಿ ಟರ್ಕಿ ತಿರುಗೇಟು ನೀಡಿ 58 ಪಾಯಿಂಟ್‌ಗಳನ್ನು ಕಲೆ ಹಾಕಿತು. ಜ್ಯೋತಿ, ಮುಸ್ಕಾನ್ ಮತ್ತು ರಾಜ್ ಕೌರ್ ಪಟ್ಟು ಬಿಡಲಿಲ್ಲ. ಗುರಿ ತಪ್ಪದೆ ಬಾಣ ಹೂಡಿದ ತಂಡ 58 ಪಾಯಿಂಟ್ ಗಳಿಸಿ ಸಮಬಲ ಸಾಧಿಸಿ ಒಟ್ಟಾರೆ ಮೂರು ಪಾಯಿಂಟ್‌ಗಳ ಮುನ್ನಡೆ ಉಳಿಸಿಕೊಂಡಿತು. ನಾಲ್ಕನೇ ಸುತ್ತು ರೋಚಕವಾಯಿತು. ಲಯ ಕಂಡುಕೊಂಡಿದ್ದ ಭಾರತದ ಬಿಲ್ಗಾರ್ತಿಯರು ಮತ್ತೊಮ್ಮೆ 58 ಪಾಯಿಂಟ್ ಗಳಿಸಿ ಪದಕಕ್ಕೆ ಮುತ್ತಿಕ್ಕಿದರು.

ಪಂದ್ಯದ ನಂತರ ಮಾತನಾಡಿದ ಜ್ಯೋತಿ ‘ಮೆಕ್ಸಿಕೊದಲ್ಲಿ 2017ರಲ್ಲಿ ಬೆಳ್ಳಿ ಗೆದ್ದಿದ್ದೆವು. ಈ ಬಾರಿ ಅದಕ್ಕಿಂತ ಉತ್ತಮ ಸಾಧನೆ ಮಾಡುವ ನಿರೀಕ್ಷೆ ಇತ್ತು. ಅದು ಸಾಧ್ಯವಾಗಲಿಲ್ಲ. ಆದರೂ ಪದಕ ಗೆಲ್ಲಲು ಸಾಧ್ಯವಾದದ್ದು ಖುಷಿ ನೀಡಿದೆ’ ಎಂದರು.