ವಿಶ್ವಸಂಸ್ಥೆಯ 73ನೇ ಮಹಾ ಅಧಿವೇಶನ : ಪಾಕಿಸ್ತಾನದಿಂದ ಹಂತಕರ ವೈಭವೀಕರಣ: ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಾಗ್ದಾಳಿ

0
794

ವಿಶ್ವಸಂಸ್ಥೆಯ 73ನೇ ಮಹಾ ಅಧಿವೇಶನ ಉದ್ದೇಶಿಸಿ ಶನಿವಾರ ಮಾತನಾಡಿದ ಸುಷ್ಮಾ ಸ್ವರಾಜ್ ಉಗ್ರರು ಹಾಗೂ ಹಂತಕರನ್ನು ವೈಭವೀಕರಿಸುವ ದೇಶದೊಂದಿಗೆ ಶಾಂತಿ ಮಾತುಕತೆ ಹೇಗೆ ತಾನೆ ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆ: ಶಾಂತಿ ಮಾತುಕತೆ ರದ್ದಾಗಲು ಭಾರತವೇ ಕಾರಣ ಎಂಬ ಪಾಕ್‌ ಆರೋಪಕ್ಕೆ ಜಾಗತಿಕ ವೇದಿಕೆಯಲ್ಲೇ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ತಿರುಗೇಟು ನೀಡಿದ್ದು, ಪಾಕಿಸ್ತಾನದ ಕಪಟತನವನ್ನು ಬಯಲು ಮಾಡಿದ್ದಾರೆ. 

ವಿಶ್ವಸಂಸ್ಥೆಯ 73ನೇ ಮಹಾ ಅಧಿವೇಶನ ಉದ್ದೇಶಿಸಿ ಸೆಪ್ಟೆಂಬರ್ 29 ರ ಶನಿವಾರ ಮಾತನಾಡಿದ ಅವರು ಉಗ್ರರು ಹಾಗೂ ಹಂತಕರನ್ನು ವೈಭವೀಕರಿಸುವ ದೇಶದೊಂದಿಗೆ ಶಾಂತಿ ಮಾತುಕತೆ ಹೇಗೆ ತಾನೆ ಸಾಧ್ಯ?ಎಂದು ಪ್ರಶ್ನಿಸಿದ್ದಾರೆ. 

ಮಾತುಕತೆ ಮರಿದುಬೀಳಲು ಭಾರತವೇ ಕಾರಣವೆಂಬ ಆರೋಪ ಅಪ್ಪಟ ಸುಳ್ಳು. ಉಭಯ ದೇಶಗಳ ನಡುವೆ ಈವರೆಗೂ ಹಲವು ಬಾರಿ ಮಾತುಕತೆ ನಡೆದಿದೆ. ಪ್ರತಿಬಾರಿಯೂ ವಿಫಲವಾದಾಗಲು ಪಾಕಿಸ್ತಾನವೇ ಕಾರಣ. ಪಾಕಿಸ್ತಾನದ ಹೊಸ ಪ್ರಧಾನಿ ಇದೇ ವಿಶ್ವಸಂಸ್ಥೆ ಮಹಾಸಭೆಯ ನೇಪಥ್ಯದಲ್ಲಿ ಉಭಯ ದೇಶಗಳ ವಿದೇಶಾಂಗ ಸಚಿವರುಗಳ ಮಟ್ಟದ ಮಾತುಕತೆಗೆ ಇಂಗಿತ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಇದಕ್ಕೆ ಭಾರತವೂ ಸಮ್ಮತಿಸಿತ್ತು. 

ಆದರೆ ಅದಾಗಿ ಕೆಲವೇ ಗಂಟೆಗಳಲ್ಲಿ ಮೂವರು ಭಾರತೀಯ ಯೋಧರನ್ನು ಉಗ್ರರು ಹತ್ಯೆ ಮಾಡಿರುವ ಸುದ್ದಿ ಸ್ಫೋಟಗೊಂಡಿತು. ಇಂತಹ ನಡೆ ಶಾಂತಿ ಮಾತುಕತೆಯ ಇಚ್ಛೆಯನ್ನು ಸೂಚಿಸುತ್ತದೆಯೇ? ಎಂದು ಸುಷ್ಮಾ ಸಭೆಯಲ್ಲಿ ನೆರೆದಿದ್ದ ವಿಶ್ವ ನಾಯಕರ ಎದುರು ಪಾಕಿಸ್ತಾನದ ನಿಜಬಣ್ಣ ಬಯಲು ಮಾಡಿದರು. 

2016ರಲ್ಲೂ ನಾನು ಖುದ್ದಾಗಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿ ಸಮಗ್ರ ದ್ವಿಪಕ್ಷೀಯ ಮಾತುಕತೆಗೆ ಆಹ್ವಾನ ನೀಡಿದ್ದೆ. ಆದರೆ, ಕೆಲವೇ ದಿನಗಳಲ್ಲಿ ಪಾಕ್‌ ಪ್ರಾಯೋಜಿತ ಉಗ್ರರು ನಮ್ಮ ಪಠಾಣ್‌ಕೋಟ್‌ ವಾಯು ನೆಲೆ ಮೇಲೆ ದಾಳಿ ನಡೆಸಿದರು. ಇಂತಹ ಉಗ್ರ ಮನಸ್ಥಿತಿ ಇರುವವರೊಂದಿಗೆ ಮಾತುಕತೆ ನಡೆಸುವುದಾದರೂ ಹೇಗೆ ನೀವೇ ತಿಳಿಸಿ ಎಂದು ಸಭೆಯಲ್ಲಿ ನೆರೆದಿದ್ದವರನ್ನು ಸುಷ್ಮಾ ಕೋರಿದರು. 

ಸುಷ್ಮಾ ಕಿಡಿನುಡಿಗಳು 
ಉಗ್ರರಿಗಿಂತಲೂ ಹೆಚ್ಚಾಗಿ ಮಾನವ ಹಕ್ಕು ಉಲ್ಲಂಘನೆ ಮಾಡುವವರು ಯಾರಿದ್ದಾರೆ? ಪಾಕಿಸ್ತಾನ ಹಂತಕರನ್ನು ವೈಭವೀಕರಿಸುತ್ತದೆ. ಅಮಾಯಕರ ರಕ್ತ ಆ ದೇಶದ ಕಣ್ಣಿಗೆ ಬೀಳುವುದಿಲ್ಲ. 

9/11 ದಾಳಿಯ ಮಾಸ್ಟರ್‌ಮೈಂಡ್‌ ಒಸಾಮಾ ಬಿನ್‌ ಲಾಡೆನ್‌ನನ್ನು ಹೊಡೆದುರುಳಿಸಲಾಗಿದೆ. ಆದರೆ, 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್‌ ಹಫೀಸ್‌ ಸಯೀದ್‌ ಇನ್ನೂ ಪಾಕಿಸ್ತಾನದ ಬೀದಿಗಳಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದಾನೆ. ಆತ ಅಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾನೆ, ರಾಲಿಗಳಲ್ಲಿ ಭಾಗವಹಿಸುತ್ತಾನೆ. ಬಹಿರಂಗವಾಗಿ ಭಾರತಕ್ಕೆ ಬೆದರಿಕೆ ಹಾಕುತ್ತಾನೆ. ಇವೆಲ್ಲದಕ್ಕೂ ಪಾಕಿಸ್ತಾನ ಸರಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ. 

ಕಳೆದ ವರ್ಷ ಪಾಕಿಸ್ತಾನದ ಪ್ರತಿನಿಧಿಗಳು ಭಾರತದ ಮಾನವ ಹಕ್ಕು ಉಲ್ಲಂಘನೆಗೆ ಸಾಕ್ಷಿಯೆಂದು ಬೇರೆ ದೇಶದ ಚಿತ್ರಗಳನ್ನು ತೋರಿಸಿ ಬೆತ್ತಲಾಗಿದ್ದರು. ಅದೇ ರೀತಿ ಮತ್ತೊಮ್ಮೆ ಭಾರತದ ವಿರುದ್ಧ ಈಗಲೂ ಪಾಕ್‌ ಸುಳ್ಳು ಆರೋಪಗಳನ್ನು ಮಾಡಿ ತನ್ನ ಚಾಳಿಯನ್ನು ತೋರಿಸುತ್ತಿದೆ. 

ಕೇವಲ ಭಯೋತ್ಪಾದನೆಯನ್ನು ಹರಡುವುದಷ್ಟೇ ಅಲ್ಲ, ತನ್ನ ಕೃತ್ಯವನ್ನು ನಿರಾಕರಿಸುವ, ಮುಚ್ಚಿಟ್ಟುಕೊಳ್ಳುವ ಕಲೆಯಲ್ಲೂ ಪಾಕ್‌ ನಿಷ್ಣಾತವಾಗಿದೆ. ಒಸಾಮಾ ಬಿನ್‌ ಲಾಡೆನ್‌ ಪಾಕಿಸ್ತಾನದಲ್ಲೇ ಸಿಕ್ಕಿಬಿದ್ದಿದ್ದು ಇದಕ್ಕೆ ಉತ್ತಮ ಉದಾಹರಣೆ.