ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್​ನಿಂದ ಹೊರಬಂದ ಅಮೆರಿಕ

0
24

ಮೆಕ್ಸಿಕೋದಿಂದ ಅಮೆರಿಕದೊಳಗೆ ಅಕ್ರಮವಾಗಿ ನುಸುಳಿ ಆಶ್ರಯ ಕೋರುವ ಕುಟುಂಬಗಳಿಂದ ಮಕ್ಕಳನ್ನು ಪ್ರತ್ಯೇಕಿಸುವ ಕುರಿತು ಅಮೆರಿಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ (ಯುಎನ್​ಎಚ್ಆರ್​ಸಿ) ​ನ ಅಧಿಕಾರಿಗಳು ಟೀಕಿಸಿದ ಬೆನ್ನಲ್ಲೇ ಅಮೆರಿಕ ಕೌನ್ಸಿಲ್​ನಿಂದ ಹೊರಬರಲು ತೀರ್ಮಾನಿಸಿದೆ.

ವಾಷಿಂಗ್ಟನ್​: ಮೆಕ್ಸಿಕೋದಿಂದ ಅಮೆರಿಕದೊಳಗೆ ಅಕ್ರಮವಾಗಿ ನುಸುಳಿ ಆಶ್ರಯ ಕೋರುವ ಕುಟುಂಬಗಳಿಂದ ಮಕ್ಕಳನ್ನು ಪ್ರತ್ಯೇಕಿಸುವ ಕುರಿತು ಅಮೆರಿಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ (ಯುಎನ್​ಎಚ್ಆರ್​ಸಿ) ​ನ ಅಧಿಕಾರಿಗಳು ಟೀಕಿಸಿದ ಬೆನ್ನಲ್ಲೇ ಅಮೆರಿಕ ಕೌನ್ಸಿಲ್​ನಿಂದ ಹೊರಬರಲು ತೀರ್ಮಾನಿಸಿದೆ.

ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿ ಮತ್ತು ಟ್ರಂಪ್​ ಸರ್ಕಾರದ ಹಿರಿಯ ಅಧಿಕಾರಿ ಮೈಕ್ ಪೊಂಪೀ ಅವರು ಮಾನವ ಹಕ್ಕುಗಳ ಕೌನ್ಸಿಲ್​ನಿಂದ ಹೊರಬರಲು ತೀರ್ಮಾನ ತೆಗೆದುಕೊಂಡಿರುವುದಾಗಿ ಘೋಷಿಸಿದ್ದಾರೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್​ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ರಾಷ್ಟ್ರಗಳ ಪರವಾಗಿ ಕೆಲಸ ಮಾಡುತ್ತಿದೆ. ಅದರಲ್ಲೂ ಮುಖ್ಯವಾಗಿ ಇಸ್ರೇಲ್​ ದೇಶದ ವಿರುದ್ಧ ಪೂರ್ವಗ್ರಹ ಪೀಡಿತ ಧೋರಣೆಯೊಂದಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

2006ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕಗಳ ಕೌನ್ಸಿಲ್​ ಅಸ್ತಿತ್ವಕ್ಕೆ ಬಂದಿತ್ತು. ಕೌನ್ಸಿಲ್​ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಇಸ್ರೇಲ್​ ವಿರುದ್ಧ ನಿರ್ಣಯಗಳನ್ನು ತೆಗೆದುಕೊಂಡಿದೆ. ವಿಶ್ವದ ಇತರೆ ರಾಷ್ಟ್ರಗಳು ಇಸ್ರೇಲ್​ ವಿರುದ್ಧ ತೆಗೆದುಕೊಂಡಿರುವ ನಿರ್ಧಾರಕ್ಕಿಂತಲೂ ಹೆಚ್ಚು ನಿರ್ಣಯಗಳನ್ನು ಕೌನ್ಸಿಲ್​ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕೌನ್ಸಿಲ್​ನಲ್ಲಿ ಆಮೂಲಾಗ್ರವಾಗಿ ಬದಲಾವಣೆ ತರಬೇಕು ಎಂದು ಅಮೆರಿಕ ಹಲವು ವರ್ಷಗಳಿಂದ ವಾದಿಸುತ್ತಿತ್ತು.

ಮಾವನ ಹಕ್ಕುಗಳನ್ನು ಸಂರಕ್ಷಿಸುವ ನೆಪದಲ್ಲಿ ಅದಕ್ಕೆ ಅವಮಾನ ಮಾಡುತ್ತಿರುವ ಸಂಸ್ಥೆಯೊಂದಿಗೆ ಇರಲು ಅಮೆರಿಕ ಒಪ್ಪುತ್ತಿಲ್ಲ. ಹಾಗಾಗಿ ಈಗ ಅಂತಿಮವಾಗಿ ಮಾನವ ಹಕ್ಕುಗಳ ಕೌನ್ಸಿಲ್​ನಿಂದ ಹೊರಬರಲು ಅಮೆರಿಕ ತೀರ್ಮಾನ ತೆಗೆದುಕೊಂಡಿದೆ ಎಂದು ನಿಕ್ಕಿ ಹ್ಯಾಲಿ ಮತ್ತು ಮೈಕ್ ಪೊಂಪೀ ತಿಳಿಸಿದ್ದಾರೆ.

ಮೆಕ್ಸಿಕೋದಿಂದ ಅಮೆರಿಕಕ್ಕೆ ಅಕ್ರಮವಾಗಿ ನುಸುಳುವಾಗ ಸಿಕ್ಕಿ ಬೀಳುವ ಕುಟುಂಬಗಳಿಂದ ಮಕ್ಕಳನ್ನು ಪ್ರತ್ಯೇಕಿಸುವ ಟ್ರಂಪ್​ ಸರ್ಕಾರದ ನಿರ್ಧಾರವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಝೀದ್ ರ’ಆದ್ ಅಲ್ ಹುಸೇನ್ ಟೀಕಿಸಿದ್ದರು. ಜತೆಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟರ್ರೆಸ್ ಸಹ ಅಮೆರಿಕದ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿ ವಿಶ್ವದೆಲ್ಲೆಡೆ ಮಾನವ ಹಕ್ಕುಗಳನ್ನು ಸಂರಕ್ಷಿಸಲು ಮಾನವ ಹಕ್ಕುಗಳ ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದ್ದರು. (ಏಜೆನ್ಸೀಸ್​)