ವಿಶ್ವಸಂಸ್ಥೆಯ ಭಾರತದ ಎಸ್‌ಡಿಜಿಎಸ್‌ ಆಗಿ “ಮಾನಸಿ ಕಿರ್ಲೋಸ್ಕರ್‌” ಆಯ್ಕೆ

0
573

ಭಾರತದ ಮೊತ್ತ ಮೊದಲ ವಿಶ್ವಸಂಸ್ಥೆಯ ಸುಸ್ಥಿತ ಅಭಿವೃದ್ಧಿ ಗುರಿಯ ಯಂಗ್‌ ಬ್ಯುಸಿನೆಸ್‌ ಚಾಂಪಿಯನ್‌ ಆಗಿ ಕಿರ್ಲೋಸ್ಕರ್‌ ಸಂಸ್ಥೆಯ ಸಿಇಒ ಮಾನಸಿ ಕಿರ್ಲೋಸ್ಕರ್‌ ಆಯ್ಕೆಯಾಗಿದ್ದಾರೆ.

ಹೊಸದಿಲ್ಲಿ: ಕಿರ್ಲೋಸ್ಕರ್‌ ಸಿಸ್ಟಮ್ಸ್‌ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರಾಗಿರುವ ಮಾನಸಿ ಕಿರ್ಲೋಸ್ಕರ್‌ ಅವರು ಭಾರತದ ಮೊತ್ತ ಮೊದಲ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿನ ಯಂಗ್‌ ಬ್ಯುಸಿನೆಸ್‌ ಚಾಂಪಿಯನ್‌ ಆಗಿ ನೇಮಕವಾಗಿದ್ದಾರೆ. 

ವ್ಯಾಪಾರ ಹಾಗೂ ವ್ಯವಹಾರದ ವಿಭಾಗದಲ್ಲಿ ಹೆಚ್ಚಿನ ಅನುಭವ ಹೊಂದಿರುವ ಮಾನಸಿ, ಸುಸ್ಥಿರ ಅಭಿವೃದ್ಧಿಗೆ ಅಗತ್ಯವಾದ ಹೊಸ ಕಾರ್ಯಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಹವಾಮಾನ ವೈಪರೀತ್ಯ, ಪ್ಲಾಸ್ಟಿಕ್‌, ತ್ಯಾಜ್ಯ ನಿರ್ವಹಣೆ ಹಾಗೂ ಮಹಿಳಾ ಸಬಲೀಕರಣದ ವಿಚಾರವಾಗಿ ವಿಶ್ವಸಂಸ್ಥೆಯೊಂದಿಗೆ ಜತೆಗೂಡಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾಗಲಿದ್ದಾರೆ. ಪ್ರಮುಖವಾಗಿ ಯುಎನ್‌-ಇಂಡಿಯಾ ಬ್ಯುಸಿನೆಸ್‌ ಫೋರಮ್‌(ಯುಎನ್‌ಐಬಿಎಫ್‌)ನ ಉದ್ಧೇಶಗಳನ್ನು ಮುಟ್ಟುವ ನಿಟ್ಟಿನಲ್ಲಿ ಮಾನಸಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಲಿದ್ದಾರೆ. 

ಸಾಮಾಜಿಕ ಕಾರ್ಯಕ್ಕಾಗಿ ಇಂತಹ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಹೊಸ ಸವಾಲುಗಳನ್ನು ನೀಡಲಿದೆ. ಎಸ್‌ಡಿಜಿಎಸ್‌ನ ವಿಭಾಗದಲ್ಲಿ ನಡೆಸುವ ವಿವಿಧ ಕಾರ್ಯಕ್ರಮಗಳು ಮುಂದಿನ ತಲೆಮಾರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸುಸ್ಥಿರ ಅಭಿವೃದ್ಧಿಯ ಕಡೆ ಹೆಚ್ಚಿನ ಒತ್ತು ನೀಡುವ ಮೂಲಕ, ಈ ವಿಭಾಗದಲ್ಲಿನ ಯೋಜನೆ, ಕಾರ್ಯಗಳನ್ನು ಸರಿಯಾಗಿ ಅನುಷ್ಠಾನಗೊಳಿಸುವುದು ಮುಖ್ಯವಾಗಲಿವೆ. ಉದ್ಯಮಿಗಳು, ಸಿಬ್ಬಂದಿಗಳು ಸುಸ್ಥಿರ ಅಭಿವೃದ್ಧಿ ಕಡೆಗೆ ಸಾಗುವ ನಿಟ್ಟಿನಲ್ಲಿ ಕೈಗೊಳ್ಳುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವ ವಿಶ್ವಾಸವಿದೆ ಎಂದು ಮಾನಸಿ ಹೇಳಿದ್ದಾರೆ. 

ಯುಎಸ್‌ನ ರೋಹ್ಡೆ ಐಸ್‌ಲ್ಯಾಂಡ್‌ ಸ್ಕೂಲ್‌ ಆಫ್‌ ಡಿಸೈನ್‌ನಲ್ಲಿ ಪದವಿ ಗಳಿಸಿದ್ದ ಅವರು, ಟೊಯೊಟೊ ಕಿರ್ಲೊಸ್ಕರ್‌ ಮೋಟರ್ಸ್‌ ಸಂಸ್ಥೆಯಲ್ಲಿ ಮೂರು ವರ್ಷ ಕೆಲಸ ಮಾಡಿದ್ದರು. ಈ ವೇಳೆ ತಾಂತ್ರಿಕ ವಿಭಾಗವನ್ನು ಅವರು ಪಕ್ವಮಾಡಿಕೊಂಡಿದ್ದರು. ವ್ಯಾಪಾರ ಹೆಚ್ಚಳ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅವರು ಕೆಲಸ ಮಾಡಿದ್ದರು. ಟೊಯೊಟೊ ಸಂಸ್ಥೆಯ ಸಹಯೋಗದೊಂದಿಗೆ ಟೊಯೊಟೊ ಮೆಟಿರೀಯಲ್‌ ಹ್ಯಾಂಡ್ಲಿಂಗ್‌ ವ್ಯವಸ್ಥೆಯನ್ನು ಸ್ಥಾಪಿಸಿದ್ದರು. ಇದಲ್ಲದೆ ವಸತಿ ಹಾಗೂ ವಾಣಿಜ್ಯ ಕಟ್ಟಡದ ಯೋಜನೆಗಳಲ್ಲೂ ಮಾನಸಿ ಕೆಲಸ ಮಾಡಿದ್ದಾರೆ. 

ಪದವಿಯ ಬಳಿಕ ಸಾಕ್ರ ವರ್ಲ್ಡ್‌ ಆಸ್ಪತ್ರೆಯ ಒಳಾಂಗಣ ವಿನ್ಯಾಸ ಮಾಡಿದ್ದು, ವಿಶೇಷ ವಸ್ತುಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. 

ಮಾನಸಿ ಅವರನ್ನು ಎಸ್‌ಡಿಜಿಎಸ್‌ನ ಯಂಗ್‌ ಬ್ಯುಸಿನೆಸ್‌ ಚಾಂಪಿಯನ್‌ ಆಗಿ ನೇಮಕ ಮಾಡಲು ನನಗೆ ಅತ್ಯಂತ ಖುಷಿ ಇದೆ. ಮಾನಸಿ ಅವರ ತೊಡಗಿಸಿಕೊಳ್ಳುವಿಕೆಯಿಂದ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ ಯುನ್‌ ರೆಸಿಡೆಂಟ್‌ ಕೋರ್ಡಿನೇಟರ್ ಯುರಿ ಅಫನಾಸೀವ್ ಹೇಳಿದರು. 

ಭಾರತದಲ್ಲಿರುವ ವಿಶ್ವಸಂಸ್ಥೆಯ ವಿಭಾಗ, ಇಂತಹ ಹುದ್ದೆಗಳಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಿದ್ದು, ಕಾರ್ಪೊರೇಟ್‌, ಅಭಿವೃದ್ಧಿ ವಿಚಾರಗಳ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯುನ್‌ಐಬಿಎಫ್‌ ಭಾರತ ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಎದುರಿಸಿ ಹೊಸ ಆವಿಷ್ಕಾರಗಳ ಕಡೆಗೆ ಹೆಚ್ಚು ಒತ್ತು ನೀಡಲು ಸಹಕರಿಸಲಿದೆ.