ವಿಶ್ವದ ಪ್ರಥಮ ಹೈಡ್ರೊಜನ್‌ ಟ್ರಾಮ್‌ ಆರಂಭ

0
39

ವಿಶ್ವದ ಪ್ರಥಮ ಹೈಬ್ರಿಡ್‌ ಎಲೆಕ್ಟ್ರಿಕ್ ಟ್ರಾಮ್‌ ಕಾರ್ಯಾಚರಣೆಯನ್ನು ಬೀಜಿಂಗ್ ನಲ್ಲಿ ಶುಕ್ರವಾರ ಆರಂಭಿಸಲಾಯಿತು. ಈ ಟ್ರಾಮ್‌ಗೆ ಪ್ರಮುಖವಾಗಿ ಹೈಡ್ರೊಜನ್‌ ಇಂಧನ ಬಳಸಲಾಗುತ್ತದೆ. ಈ ಮೂಲಕ ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಚೀನಾ ಮಹತ್ವದ ಕ್ರಮಕೈಗೊಂಡಿದೆ.

’ಚೀನಾದವರೇ ಈ ಟ್ರಾಮ್‌ ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸಿ ತಯಾರಿಸಿದ್ದಾರೆ’ ಎಂದು ಟ್ರಾಮ್‌ ತಯಾರಿಸಿರುವ ಚೀನಾ ರೈಲ್ವೆ ರೋಲಿಂಗ್‌ ಕಾರ್ಪೋರೇಷನ್‌ ಕಂಪೆನಿ ತಿಳಿಸಿದೆ.

ಹೇಬಿ ಪ್ರಾಂತ್ಯದ ತಂಗ್ಷಾನ್‌ ನಗರದಲ್ಲಿ ಈ ಟ್ರಾಮ್‌ ಸೇವೆ ಆರಂಭಿಸಲಾಗಿದೆ. ನಗರದ ಹಲವು ಐತಿಹಾಸಿಕ ಸ್ಥಳಗಳಿಗೆ ಇದು ತೆರಳುತ್ತದೆ.

ಟ್ರಾಮ್‌ ನೀರನ್ನು ಮಾತ್ರ ಹೊರಗೆ ಚೆಲ್ಲುವುದರಿಂದ ಯಾವುದೇ ರೀತಿಯ ಮಾಲಿನ್ಯ ಉಂಟಾಗುವುದಿಲ್ಲ. ಪ್ರಯಾಣಿಕರು ಟ್ರಾಮ್‌ ಹತ್ತುವುದು ಮತ್ತು ಇಳಿಯುವುದು ಸುಲಭವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ. ನೆಲದ ಮಟ್ಟ ಮತ್ತು ಟ್ರಾಮ್‌ ನಡುವೆ ಕೇವಲ 35 ಸೆಂಟಿಮೀಟರ್‌ ಅಂತರವಿರುವಂತೆ ಟ್ರಾಮ್‌ ಅನ್ನು ರೂಪಿಸಲಾಗಿದೆ.

66 ಸೀಟುಗಳನ್ನು ಈ ಟ್ರಾಮ್‌ ಹೊಂದಿದೆ. 12 ಕಿಲೋಗ್ರಾಂ ಹೈಡ್ರೊಜನ್‌ ಭರ್ತಿ ಮಾಡಿ, ಪ್ರತಿ ಗಂಟೆಗೆ ಗರಿಷ್ಠ 70 ಕಿಲೋಮೀಟರ್‌ ವೇಗದಲ್ಲಿ ಸಾಗಿದರೆ 40 ಕಿಲೋಮೀಟರ್‌ ಮಾತ್ರ ಇದು ಕ್ರಮಿಸಬಲ್ಲದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.