ವಿಶ್ವದ ಅತ್ಯುತ್ತಮ ವಿ.ವಿಗಳಲ್ಲಿ ಬೆಂಗಳೂರಿನ ಐಐಎಸ್‌ಸಿಗೆ ಸ್ಥಾನ

0
38

ಪ್ರತಿಷ್ಠಿತ ಕ್ವಾಕ್‌ಕ್ವರೇಲಿ ಸೈಮಂಡ್ಸ್‌ (ಕ್ಯೂಎಸ್‌) ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 184 ನೇ ರ‍್ಯಾಂಕ್ ಪಡೆಯುವ ಮೂಲಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹ ಸ್ಥಾನ ಪಡೆದಿದೆ

ನವದೆಹಲಿ (ಪಿಟಿಐ): ಪ್ರತಿಷ್ಠಿತ ಕ್ವಾಕ್‌ಕ್ವರೇಲಿ ಸೈಮಂಡ್ಸ್‌ (ಕ್ಯೂಎಸ್‌) ವಿಶ್ವ ವಿಶ್ವವಿದ್ಯಾಲಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ  184 ನೇ ರ‍್ಯಾಂಕ್  ಪಡೆಯುವ ಮೂಲಕ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹ ಸ್ಥಾನ ಪಡೆದಿದೆ.

ಲಂಡನ್‌ನಲ್ಲಿ ಜೂನ್ 19 ರ ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ವಿಶ್ವದ 200 ಅತ್ಯುತ್ತಮ ವಿಶ್ವವಿದ್ಯಾಲಯ/ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಲಾಗಿದೆ. ಮೆಸಾಚ್ಯುಸೆಟ್ಸ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಸ್ಟಾನ್​ಫೋರ್ಟ್ ಯೂನಿವರ್ಸಿಟಿ, ಹಾರ್ವರ್ಡ್ ಯೂನಿವರ್ಸಿಟಿ, ಆಕ್ಸ್​ಫರ್ಡ್ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕ್ರಮವಾಗಿ ಮೊದಲ ಐದು ರ‍್ಯಾಂಕ್ ಪಡೆದುಕೊಂಡಿವೆ.

152 ನೇ ರ‍್ಯಾಂಕ್ ಐಐಟಿ–ಬಾಂಬೆ, 182 ನೇ ರ‍್ಯಾಂಕ್ ಐಐಟಿ–ದೆಹಲಿ ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಇದನ್ನು ಕ್ಯೂಎಸ್‌ ಗ್ಲೋಬಲ್‌ ರ‍್ಯಾಂಕಿಂಗ್‌ ಎಂದೂ ಕರೆಯಲಾಗುತ್ತದೆ.

ಈ ಬಾರಿ ಪಟ್ಟಿಯಲ್ಲಿ ಹೊಸದಾಗಿ 50 ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದಿವೆ. ಭಾರತ ಮೂಲದ ಒ.ಪಿ.ಜಿಂದಾಲ್‌ ಗ್ಲೋಬಲ್ ವಿಶ್ವವಿದ್ಯಾಲಯ (ಜೆಜಿಯು) ಇವುಗಳಲ್ಲಿ ಒಂದು. ಇತ್ತೀಚೆಗೆ ಸ್ಥಾಪನೆಗೊಂಡು (ಸ್ಥಾಪನೆ 2009) ಕ್ಯೂಎಸ್‌ ಗ್ಲೋಬಲ್‌ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಹೆಗ್ಗಳಿಕೆಯೂ ಈ ಸಂಸ್ಥೆಯದು.
 
ಐಐಟಿ–ಮದ್ರಾಸ್‌, ಐಐಟಿ–ಖರಗ್‌ಪುರ, ಐಐಟಿ– ಕಾನ್ಪುರ ಹಾಗೂ ಐಐಟಿ–ರೂರ್ಕಿ ಟಾಪ್‌–400 ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಕಳೆದ ವರ್ಷ 472 ಸ್ಥಾನದಲ್ಲಿದ್ದ ಐಐಟಿ–ಗುವಾಹಟಿ ಈ ಬಾರಿ 491ನೇ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.