ವಿಶ್ವದಾಖಲೆ ಬರೆದ ಕೈಗಾದ ಮೊದಲ ಘಟಕ

0
592

ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 894 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದೆ. ಕೆನಡಾದ ಒಂಟಾರಿಯಾದ ಪಿಕರಿಂಗ್‌ನಲ್ಲಿರುವ ಅಣು ವಿದ್ಯುತ್ ಸ್ಥಾವರದ ಘಟಕವೊಂದರ ದಾಖಲೆಯನ್ನು
ಅಕ್ಟೋಬರ್ 24 ರ ಬುಧವಾರ ಸರಿಗಟ್ಟಿದೆ.

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು 894 ದಿನಗಳಿಂದ ನಿರಂತರ ವಿದ್ಯುತ್ ಉತ್ಪಾದಿಸಿ ವಿಶ್ವದಲ್ಲೇ ಎರಡನೇ ಸ್ಥಾನಕ್ಕೇರಿದೆ. ಕೆನಡಾದ ಒಂಟಾರಿಯಾದ ಪಿಕರಿಂಗ್‌ನಲ್ಲಿರುವ ಅಣು ವಿದ್ಯುತ್ ಸ್ಥಾವರದ ಘಟಕವೊಂದರ ದಾಖಲೆಯನ್ನು ಅಕ್ಟೋಬರ್ 24 ರ ಬುಧವಾರ ಸರಿಗಟ್ಟಿದೆ.

ಈ ಮೂಲಕ ಭಾರ ಜಲ ರಿಯಾಕ್ಟರ್ (Heavy Pressurised Water Reactor) ವಿಭಾಗದಲ್ಲಿ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ. 

ಅತಿ ಹೆಚ್ಚು ದಿನ ನಿರಂತರ ಕಾರ್ಯ ನಿರ್ವಹಿಸಿದ ಎಲ್ಲ ಮಾದರಿಗಳ ರಿಯಾಕ್ಟರ್‌ಗಳ ಪೈಕಿ ಕೈಗಾದ ಮೊದಲ ಘಟಕವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೂ 46 ದಿನಗಳ ಕಾರ್ಯ ನಿರ್ವಹಣೆ ಮಾಡಿದರೆ 941 ದಿನ ಪೂರೈಸಲಿದ್ದು, ಇಂಗ್ಲೆಂಡ್‌ನ ಹೇಶಮ್ (940 ದಿನ) ಅಣು ವಿದ್ಯುತ್ ಉತ್ಪಾದನಾ ಘಟಕದ ದಾಖಲೆಯನ್ನು ಅಳಿಸಿ ಹಾಕಲಿದೆ.

‘ಈ ಹಿಂದೆ ಪರಿಶೀಲನೆ ನಡೆಸಿದ್ದ ಭಾರತೀಯ ಪರಮಾಣು ಪ್ರಾಧಿಕಾರದ ಅಧಿಕಾರಿಗಳು ಘಟಕವು ಸುಸ್ಥಿತಿಯಲ್ಲಿ ಇರುವುದನ್ನು ದೃಢೀಕರಿಸಿದ್ದರು. ಅದರಂತೆ ನ.15ರವರೆಗೆ ಚಾಲನೆಯಲ್ಲಿಡಲು ಅನುಮತಿ ನೀಡಿದ್ದರು. ಅಂದಿಗೆ ಈ ಘಟಕವು 916 ದಿನಗಳನ್ನು ಪೂರೈಸಲಿದೆ. ಆಗ ನಾವು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಪುನಃ ಪರಿಶೀಲನೆ ನಡೆಸಿ ರಿಯಾಕ್ಟರ್‌ ಅನ್ನು ಚಾಲನೆಯಲ್ಲಿಡಲು ಅನುಮತಿ ನೀಡಬಹುದು ಅಥವಾ ನಿರಾಕರಿಸಬಹುದು. ಈ ಘಟಕವು ಸುಸ್ಥಿತಿಯಲ್ಲಿ ಇರುವ ಕಾರಣ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಕೈಗಾ ಅಣು ವಿದ್ಯುತ್ ಸ್ಥಾವರದ ಸಾರ್ವಜನಿಕ ಜಾಗೃತಿ ಅಧಿಕಾರಿ ಶೇಷಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.