ವಿಶ್ವದಾಖಲೆ ಬರೆದ ಅರುಣಿಮಾ ಸಿನ್ಹಾ

0
1277

ಕೃತಕ ಕಾಲಿನ ಮೂಲಕ ಅತಿ ಅಪಾಯಕಾರಿ, ಹಿಮಚ್ಛಾದಿತ ಹಾಗೂ ಅಂಟಾರ್ಟಿಕಾದ ಅತಿ ಎತ್ತರದ ಶಿಖರ ಏರಿದ ಮಹಿಳೆ ಎಂಬ ಖ್ಯಾತಿಗೆ ಭಾರತದ ಪರ್ವತಾರೋಹಿ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ.

ನವದೆಹಲಿ: ಕೃತಕ ಕಾಲಿನ ಮೂಲಕ ಅತಿ ಅಪಾಯಕಾರಿ, ಹಿಮಚ್ಛಾದಿತ ಹಾಗೂ ಅಂಟಾರ್ಟಿಕಾದ ಅತಿ ಎತ್ತರದ ಶಿಖರ ಏರಿದ ಮಹಿಳೆ ಎಂಬ ಖ್ಯಾತಿಗೆ ಭಾರತದ ಪರ್ವತಾರೋಹಿ ಅರುಣಿಮಾ ಸಿನ್ಹಾ ಪಾತ್ರರಾಗಿದ್ದಾರೆ. ವಿಶ್ವದ ಎಲ್ಲ ದೊಡ್ಡ ಶಿಖರಗಳನ್ನು ಏರಿರುವ ಆರುಣಿಮಾ, ಅಂಟಾರ್ಟಿಕಾ ಮೌಂಟ್ ವಿನ್ಸನ್ ಏರುವ ಕನಸು ಹೊಂದಿದ್ದರು. 2013ರಲ್ಲಿ ಮೌಂಟ್​ಎವರೆಸ್ಟ್ ಏರಿದಾಗಲೇ ಅವರು ವಿನ್ಸನ್ ಮೇಲೇರಲು ಮನಸ್ಸಿನಲ್ಲಿ ಸಂಕಲ್ಪಿಸಿದ್ದರು. 5 ವರ್ಷಗಳ ಸತತ ತಾಲೀಮು ನಡೆಸಿದ ಬಳಿಕ ಈಗ ಅವರ ಕನಸು ನನಸಾಗಿದೆ. ಕೃತಕ ಕಾಲಿನ ಹೊರತಾಗಿಯೂ ಅಪಾಯಕಾರಿ ಪರ್ವತ ಆರೋಹಣ ಮಾಡಿದ ಅರುಣಿಮಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿ ಗಣ್ಯರು ಅಭಿನಂದನೆಯ ಮಹಾಪೂರ ಹರಿಸಿದ್ದಾರೆ.

ಪ್ರಧಾನಿ ನೀಡಿದ್ದ ಧ್ವಜ: ಡಿ.18ರಂದು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಭಾರತದ ಧ್ವಜ ಸ್ವೀಕರಿಸಿದ್ದ ಅರುಣಿಮಾ, ಜ.3ರ ಮಧ್ಯಾಹ್ನ ಮೌಂಟ್ ವಿನ್ಸನ್​ನಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದಾರೆ. ಕೂಡಲೇ ಚಿತ್ರದ ಸಮೇತ ಟ್ವೀಟ್ ಮಾಡಿ, ‘ ನನ್ನ ಕನಸಿಗೆ ಆಶೀರ್ವಾದ ಮಾಡಿದ ಪ್ರಧಾನಿ ಮೋದಿ, ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹಾಗೂ ಇತರರಿಗೆ ಧನ್ಯವಾದ ’ ಎಂದು ಖುಷಿ ಹಂಚಿಕೊಂಡಿದ್ದಾರೆ. ವಿಶ್ವದ ಅಪಾಯಕಾರಿ ಪರ್ವತ ಎಂಬ ಕುಖ್ಯಾತಿಯ ಮೌಂಟ್ ವಿನ್ಸನ್ ಏರಿದ ಮೊದಲ ಅಂಗವಿಕಲ ಮಹಿಳಾ ಪರ್ವತಾರೋಹಿ ಎಂಬ ಹೆಗ್ಗಳಿಕೆ ಅರುಣಿಮಾ ಅವರದ್ದಾಗಿದೆ.

ಕೃತಕ ಕಾಲಿನ ಶಿಖರಗಾಥೆ

ರಾಷ್ಟ್ರ ಮಟ್ಟದ ವಾಲಿಬಾಲ್ ಪಟುವಾಗಿದ್ದ ಅರುಣಿಮಾಉದ್ಯೋಗ ಹುಡುಕಿ ಲಖನೌನಿಂದ ದೆಹಲಿಯತ್ತ ರೈಲಿನಲ್ಲಿ ಬರುತ್ತಿದ್ದಾಗ ದರೋಡೆಕೋರರು ಅವರನ್ನು ರೈಲಿನಿಂದ ಕೆಳಗೆ ಎಸೆದಿದ್ದರು. ಅವರ ಕಾಲಿನ ಮೇಲೆ ರೈಲು ಹರಿದು ಒಂದು ಕಾಲು ತುಂಡಾಗಿತ್ತು. 2011ರಿಂದ ಸುಮಾರು ಒಂದೂವರೆ ವರ್ಷಗಳಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅರುಣಿಮಾ, ಸತತ ತರಬೇತಿ ಮೂಲಕ 2013ರಲ್ಲಿ ಮೌಂಟ್ ಎವರೆಸ್ಟ್ ಏರಿ ವಿಶ್ವದಾಖಲೆ ಬರೆದಿದ್ದರು. ಸರ್ಕಾರಿ ಕೆಲಸವನ್ನು ತಿರಸ್ಕರಿಸಿ ಪರ್ವತಾರೋಹಿಯಾಗಲು ಹೊರಟಾಗ ಸಂಬಂಧಿಕರು, ಸ್ನೇಹಿತರು ಟೀಕಿಸಿದ್ದರು. ಅವರ ಸಾಧನೆ ಗುರುತಿಸಿ ಎನ್​ಡಿಎ ಸರ್ಕಾರ ಅರುಣಿಮಾಗೆ ಪದ್ಮಶ್ರೀ ಪ್ರಶಸ್ತಿ ನೀಡಿತ್ತು.

ಸಾಧನೆಯ ಹೊಸ ಶಿಖರಕ್ಕೆ ಅಭಿನಂದನೆಗಳು. ಅರುಣಿಮಾ ಈ ದೇಶದ ಹೆಮ್ಮೆಯಾಗಿದ್ದಾರೆ. ಕಠಿಣ ಪರಿಶ್ರಮದ ಮೂಲಕ ಯಾವ ಸಾಧನೆಯೂ ಅಸಾಧ್ಯವಲ್ಲ ಎನ್ನುವುದನ್ನು ನಿರೂಪಿಸಿದ್ದಾರೆ.

| ನರೇಂದ್ರ ಮೋದಿ ಪ್ರಧಾನಿ