ವಿಶ್ವದಲ್ಲಿಯೇ ನಮ್ಮ ದೇಶದಲ್ಲಿ ಮೊಬೈಲ್‌ ಡೇಟಾ ದರ ಅಗ್ಗ

0
753

ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ಜಿಯೊ ಪ್ರವೇಶದ ಬಳಿಕ, ಭಾರತದ ಟೆಲಿಕಾಂ ವಲಯದಲ್ಲಿ ಸಂಚಲನವೇ ಆಗಿದೆ. ಹೆಚ್ಚಿನ ಜನರು ಮೊಬೈಲ್‌ ಡೇಟಾ ಬಳಸುತ್ತಿರುವುದು ಒಂದು ಕಡೆಯಾದರೆ, ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್‌ ಡೇಟಾ ದರ ಅತಿ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

ಹೊಸದಿಲ್ಲಿ: ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ಜಿಯೊ ಪ್ರವೇಶದ ಬಳಿಕ, ಭಾರತದ ಟೆಲಿಕಾಂ ವಲಯದಲ್ಲಿ ಸಂಚಲನವೇ ಆಗಿದೆ. ಹೆಚ್ಚಿನ ಜನರು ಮೊಬೈಲ್‌ ಡೇಟಾ ಬಳಸುತ್ತಿರುವುದು ಒಂದು ಕಡೆಯಾದರೆ, ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್‌ ಡೇಟಾ ದರ ಅತಿ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

ಭಾರತದಲ್ಲಿ 1 ಜಿಬಿಗೆ ಸರಾಸರಿ ರೂ. 18.50 ಇದ್ದರೆ, ಜಾಗತಿಕ ಮಟ್ಟದಲ್ಲಿ 1 ಜಿಬಿ ಡೇಟಾ ದರ ಸರಾಸರಿ ರೂ.600 ಇದೆ ಎಂದು ‘ಕೇಬಲ್‌ ಕೊ ಡಾಟ್‌ ಯುಕೆ’ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ. ವಿವಿಧ ದೇಶಗಳ ಡೇಟಾ ದರವನ್ನು ಹೋಲಿಸಲಾಗಿದ್ದು, ಭಾರತದ ಗ್ರಾಹಕರು ಅಗ್ಗದ ದರಕ್ಕೆಹೆಚ್ಚಿನ ಡೇಟಾ ಖರೀದಿಸುತ್ತಿದ್ದಾರೆ ಎನ್ನಲಾಗಿದೆ. 

1 ಜಿಬಿ ಡೇಟಾಗೆ ಬ್ರಿಟನ್‌ನಲ್ಲಿ ರೂ.467 ಇದ್ದರೆ, ಅಮೆರಿಕದಲ್ಲಿ ರೂ.868 ಇದೆ. ”ಯುವ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ದೇಶಗಳು ಆಧುನಿಕ ತಂತ್ರಜ್ಞಾನದ ಅರಿವನ್ನು ಹೊಂದಿರುತ್ತವೆ. ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯು ಈಗ ಪ್ರಕಾಶಿಸುತ್ತಿದೆ. ಟೆಲಿಕಾಂ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಗ್ರಾಹಕರನ್ನು ಸೆಳೆಯಲು ಅಗ್ಗದ ದರಕ್ಕೆ ಸೇವೆಯನ್ನು ನೀಡುತ್ತಿವೆ,” ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. 

ಕಳೆದ ವರ್ಷದ ಅಕ್ಟೋಬರ್‌ 23 ಮತ್ತು ನವೆಂಬರ್‌ 28ರ ನಡುವೆ 230 ದೇಶಗಳಲ್ಲಿನ 6,313 ಮೊಬೈಲ್‌ ಪ್ಲಾನ್‌ಗಳನ್ನು ಹೋಲಿಕೆ ಮಾಡಿದ ಕೇಬಲ್‌ ಕೋ ಡಾಟ್‌ ಯುಕೆ, ಭಾರತದಲ್ಲಿನ ಡೇಟಾ ಕ್ರಾಂತಿಯನ್ನು ದಾಖಲಿಸಿದೆ. ಭಾರತದ ಮಾರುಕಟ್ಟೆಯಲ್ಲಿನ 57 ಯೋಜನೆಗಳನ್ನು ಅಧ್ಯಯನದ ವೇಳೆ ಪರಾಮರ್ಶಿಸಲಾಗಿದೆ. ಇಲ್ಲಿ 1ಜಿಬಿಗೆ ಕನಿಷ್ಠ ರೂ.1.75 ಇದ್ದರೆ, ಗರಿಷ್ಠ ರೂ.99.90 ಇದೆ. ಅಗ್ಗದ ಡೇಟಾ ಸೇವೆಯಲ್ಲಿ ಭಾರತದ ನಂತರದ ಸ್ಥಾನದಲ್ಲಿ ಕಿರ್ಗಿಸ್ತಾನ್‌ ಇದೆ. ಅಲ್ಲಿ ಜಿಬಿಗೆ ರೂ.18.95 ನೀಡಬೇಕು. ಕಜಕಸ್ತಾನ್‌, ಉಕ್ರೇನ್‌ಗಳು ಆ ನಂತರದ ಸ್ಥಾನದಲ್ಲಿವೆ. ಡೇಟಾ ದರ ದುಬಾರಿಯಾಗಿರುವ ದೇಶಗಳಲ್ಲಿ ಜಿಂಬಾವ್ವೆ ಅಗ್ರ ಸ್ಥಾನದಲ್ಲಿದೆ. ಇಲ್ಲಿ 1 ಜಿಬಿ ಡೇಟಾಗೆ ರೂ.5,277 ತೆರಬೇಕು. 

ಭಾರತದಲ್ಲಿ 43 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರಿದ್ದು, ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಹೊಂದಿದ ದೇಶವಾಗಿದೆ. ಚೀನಾ ಮೊದಲ ಸ್ಥಾನದಲ್ಲಿದೆ. 

ಕಿಚ್ಚು ಹಚ್ಚಿದ ಅಂಬಾನಿ
2016ರಲ್ಲಿ ಭಾರತದ ಟೆಲಿಕಾಮ್‌ ಮಾರುಕಟ್ಟೆಗೆ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಜಿಯೊ ಪ್ರವೇಶಿಸಿತು. 1ಜಿಬಿ ಡೇಟಾಕ್ಕೆ ಆಗ ಏರ್‌ಟೆಲ್‌, ಐಡಿಯಾ ಮತ್ತಿತರ ಕಂಪನಿಗಳು 250 ರೂ. ವಿಧಿಸುತ್ತಿದ್ದವು. ಆರಂಭದಲ್ಲಿ ಉಚಿತವಾಗಿ 4ಜಿ ಸೇವೆ ನೀಡಿದ ಜಿಯೊ, ಬಳಿಕ ಅಗ್ಗದ ದರದಲ್ಲಿಯೇ ಸೇವೆಯನ್ನು ಮುಂದುವರಿಸಿದೆ. ಜಿಯೊ ಪ್ರವೇಶದ ಬಳಿಕ ದರ ಸಮರ ಆರಂಭವಾಗಿ, ಇತರೆ ಕಂಪನಿಗಳ ಗ್ರಾಹಕರಿಗೂ ಅಗ್ಗದ ದರಕ್ಕೆ ಡೇಟಾ ಸಿಗುವಂತೆ ಆಗಿದೆ. ಈಗ 28 ಕೋಟಿ ಗ್ರಾಹಕರನ್ನು ಜಿಯೊ ಹೊಂದಿದೆ. 

1ಜಿಬಿ ಡೇಟಾದ ಸರಾಸರಿ ದರ
ಭಾರತ ರೂ. 18.50, 
ಬ್ರಿಟನ್‌ ರೂ. 467, 
ಅಮೆರಿಕ ರೂ. 868, 
ಜಿಂಬಾಬ್ವೆ ರೂ. 5,277, 
ಜಾಗತಿಕ ಮಟ್ಟದಲ್ಲಿ ರೂ. 600.