ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಆರು ಪದಕ

0
16

ಭಾರತದ ಶೂಟರ್‌ಗಳು, ಜರ್ಮನಿಯ ಸುಹ್ಲ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯಲ್ಲಿ ಜುಲೈ 14 ರ ಭಾನುವಾರ ಎರಡು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಗೆದ್ದುಕೊಂಡರು.

ನವದೆಹಲಿ (ಪಿಟಿಐ): ಭಾರತದ ಶೂಟರ್‌ಗಳು, ಜರ್ಮನಿಯ ಸುಹ್ಲ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಟೂರ್ನಿಯಲ್ಲಿ ಭಾನುವಾರ ಎರಡು ಚಿನ್ನ ಸೇರಿದಂತೆ ಒಟ್ಟು ಆರು ಪದಕಗಳನ್ನು ಗೆದ್ದುಕೊಂಡರು.

ಪುರುಷರ 50 ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ ಗೌರವ್‌ ರಾಣಾ ಮತ್ತು ಅರ್ಜುನ್‌ ಸಿಂಗ್ ಚೀಮಾ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಪಡೆದರು. ರಾಣಾ 553 ಪಾಯಿಂಟ್‌ ಸಂಗ್ರಹಿದರೆ, ಚೀಮಾ ಅವರ ಗಳಿಕೆ 551 ಪಾಯಿಂಟ್ಸ್‌.

ಇವರಿಬ್ಬರು, ವಿಜಯವೀರ್‌ ಸಿಧು ಜೊತೆಗೂಡಿ ತಂಡ ವಿಭಾಗದಲ್ಲೂ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟರು. ಈ ತಂಡ 1651 ಪಾಯಿಂಟ್‌ ಕಲೆಹಾಕಿದರೆ, ಬೆಲಾರಸ್‌ ತಂಡ (1610 ಪಾಯಿಂಟ್‌) ಬೆಳ್ಳಿಯ ಪದಕ ಗೆದ್ದುಕೊಂಡಿತು. ವಿಜಯವೀರ್‌ಗೆ ಇದು ಎರಡನೇ ಚಿನ್ನ. ಮೊದಲ ದಿನ 25 ಮೀ. ಪಿಸ್ತೂಲ್‌ ಟೀಮ್‌ ವಿಭಾಗದಲ್ಲೂ ಅವರು ಚಿನ್ನ ಗೆದ್ದ ತಂಡದಲ್ಲಿದ್ದರು.

ಮಹಿಳೆಯರ 50 ಮೀ. ಪಿಸ್ತೂಲ್‌ ವಿಭಾಗದಲ್ಲಿ ಪ್ರಿಯಾ ರಾಘವ್‌ 535 ಪಾಯಿಂಟ್‌ ಗಳಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ವಿಭೂತಿ ಭಾಟಿಯಾ 531 ಅಂಕಗಳೊಡನೆ ಕಂಚಿನ ಪದಕ ಪಡೆದರು. ಇವರಿಬ್ಬರ ಜೊತೆ ಹರ್ಷದಾ ನಿತಾವೆ ಸೇರಿಕೊಂಡು ಟೀಮ್‌ ವಿಭಾಗದಲ್ಲಿ ಭಾರತಕ್ಕೆ ರಜತ ಪದಕ ಗೆಲ್ಲಿಸಿಕೊಟ್ಟರು. ಈ ವಿಭಾಗದಲ್ಲಿ ರಷ್ಯಾ ಚಿನ್ನದ ಪದಕ ಗೆದ್ದುಕೊಂಡಿತು.