ವಿಶ್ವಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ

0
1014

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತವು ಅತಿಹೆಚ್ಚು ಮತ ಪಡೆಯುವ ಮೂಲಕ ಸದಸ್ಯತ್ವ ಪಡೆದಿದೆ.

ವಾಷಿಂಗ್ಟನ್: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ನಡೆದ ಚುನಾವಣೆಯಲ್ಲಿ ಭಾರತವು ಅತಿಹೆಚ್ಚು ಮತ ಪಡೆಯುವ ಮೂಲಕ ಸದಸ್ಯತ್ವ ಪಡೆದಿದೆ.

ಶುಕ್ರವಾರ ಮಂಡಳಿಗೆ 18 ನೂತನ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಭಾರತವು ಏಷ್ಯಾ-ಫೆಸಿಫಿಕ್​ ವಿಭಾಗದಲ್ಲಿ ಸ್ಪರ್ಧಿಸಿತ್ತು. ಈ ವಿಭಾಗದಲ್ಲಿ ಭಾರತವು ಅತಿಹೆಚ್ಚು ಎಂದರೆ 188 ಮತ ಪಡೆಯುವ ಮೂಲಕ ಇದೇ ಮೊದಲ ಬಾರಿಗೆ ಸದಸ್ಯತ್ವ ಪಡೆದಿದೆ.

ಭಾರತದೊಂದಿಗೆ ಏಷ್ಯ ಫೆಸಿಫಿಕ್​ ವಿಭಾಗದಲ್ಲಿ ಫಿಜಿ (187 ಮತ), ಬಾಂಗ್ಲಾದೇಶ (178 ಮತ), ಬಹ್ರೇನ್​ (165 ಮತ) ಮತ್ತು ಫಿಲಿಫಿನ್ಸ್​ (165 ಮತ) ಪಡೆದು ಆಯ್ಕೆಯಾಗಿದೆ. ಸದಸ್ಯತ್ವ 3 ವರ್ಷಗಳ ಅವಧಿಗೆ ಇರಲಿದ್ದು, 2019ರ ಜನವರಿ ಒಂದರಿಂದ ಅವಧಿ ಆರಂಭವಾಗಲಿದೆ.

ಉಳಿದಂತೆ ಆಫ್ರಿಕಾ ರಾಷ್ಟ್ರಗಳ ವಿಭಾಗದಲ್ಲಿ ಬುರ್ಕಿನಾ ಫಾಸೊ, ಕ್ಯಾಮರೂನ್, ಎರಿಟ್ರಿಯಾ, ಸೊಮಾಲಿಯಾ, ಟೋಗೋ, ಪೂರ್ವ ಯೂರೋಪ್​ ರಾಷ್ಟ್ರಗಳ ವಿಭಾಗದಲ್ಲಿ ಬಲ್ಗೇರಿಯಾ, ಜೆಕ್​ ರಿಪಬ್ಲಿಕ್​, ಲ್ಯಾಟಿನ್​ ಅಮೆರಿಕ ಮತ್ತು ಕೆರಿಬಿಯನ್​ ರಾಷ್ಟ್ರಗಳ ವಿಭಾಗದಲ್ಲಿ ಅರ್ಜೆಂಟೀನಾ, ಬಹಾಮಾಸ್​ ಮತ್ತು ಉರುಗ್ವೆ, ಪಶ್ಚಿಮ ಯೂರೋಪ್​ ರಾಷ್ಟ್ರಗಳ ವಿಭಾಗದಲ್ಲಿ ಆಸ್ಟ್ರಿಯಾ, ಡೆನ್ಮಾರ್ಕ್​ ಮತ್ತು ಇಟಲಿ ಆಯ್ಕೆಯಾಗಿವೆ.

ವಿಶ್ವಸಂಸ್ಥೆ ಕಾಯಂ ಸದಸ್ಯತ್ವದ ಮೇಲೆ ಕಣ್ಣಿಟ್ಟಿರುವ ಭಾರತವು ಈ ಚುನಾವಣೆಯಲ್ಲಿ ಅತಿ ಹೆಚ್ಚು ಮತ ಪಡೆಯುವ ಮೂಲಕ ವಿಶ್ವಸಂಸ್ಥೆಯಲ್ಲಿ ತನ್ನ ಪ್ರಾಬಲ್ಯ ಪ್ರದರ್ಶಿಸಿದೆ. ಈ ಚುನಾವಣೆಯಲ್ಲಿನ ಜಯವು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿದೇಶಾಂಗ ನೀತಿಗೆ ಸಿಕ್ಕ ಗೆಲುವು ಎನ್ನಲಾಗುತ್ತಿದೆ. (ಏಜೆನ್ಸೀಸ್​)