ವಿವಿ, ಕಾಲೇಜುಗಳಲ್ಲಿ ಪ್ಲಾಸ್ಟಿಕ್‌ ನಿಷೇಧ

0
31

ಪ್ಲಾಸ್ಟಿಕ್‌ ಮುಕ್ತ ಭಾರತ ಮಾಡಬೇಕು ಎಂದು ಪಣತೊಟ್ಟಿರುವ ಕೇಂದ್ರದ ನರೇಂದ್ರ ಮೋದಿ ಸರಕಾರವು ದೇಶದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಆವರಣದಲ್ಲಿ ಒಮ್ಮೆ ಮಾತ್ರ ಬಳಕೆ ಮಾಡಬಲ್ಲ ಪ್ಲಾಸ್ಟಿಕ್‌ ಅನ್ನು ನಿಷೇಧಿಸಿದೆ.

ಹೊಸದಿಲ್ಲಿ: ಪ್ಲಾಸ್ಟಿಕ್‌ ಮುಕ್ತ ಭಾರತ ಮಾಡಬೇಕು ಎಂದು ಪಣತೊಟ್ಟಿರುವ ಕೇಂದ್ರದ ನರೇಂದ್ರ ಮೋದಿ ಸರಕಾರವು ದೇಶದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಆವರಣದಲ್ಲಿ ಒಮ್ಮೆ ಮಾತ್ರ ಬಳಕೆ ಮಾಡಬಲ್ಲ ಪ್ಲಾಸ್ಟಿಕ್‌ ಅನ್ನು ನಿಷೇಧಿಸಿದೆ

ಈ ಸಂಬಂಧ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ಕೇಂದ್ರ ಮಾನವ ಸಂಪದ ಅಭಿವೃದ್ಧಿ ಸಚಿವಾಲಯಗಳು ಎಲ್ಲ ವಿವಿಗಳಿಗೆ ಸೂಚನೆಯನ್ನು ನೀಡಿವೆ. ಈ ಸಂಬಂಧ ಮಾರ್ಗಸೂಚಿಯೊಂದನ್ನೂ ಬಿಡುಗಡೆ ಮಾಡಲಾಗಿದ್ದು ಏನು ಮಾಡಬೇಕು ಎಂಬ ಬಗ್ಗೆ ಸ್ಪಷ್ಟ ಸೂಚನೆಯನ್ನೂ ನೀಡಲಾಗಿದೆ.

ಈಗಾಗಲೇ ಕೇಂದ್ರ ಸರಕಾರ ‘ಸ್ವಚ್ಛತಾ ಹೀ ಸೇವಾ’ ಎಂಬ ಕಾರ್ಯಕ್ರಮ ಆರಂಭಿಸಿದ್ದು, ಅಕ್ಟೋಬರ್.2ರ ಗಾಂಧಿ ಜಯಂತಿಯ ದಿನ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಾದ್ಯಂತ ಒಮ್ಮೆ ಮಾತ್ರ ಬಳಕೆಯ ಪ್ಲಾಸ್ಟಿಕ್‌ ನಿಷೇಧದ ಬಗ್ಗೆ ಘೋಷಣೆ ಮಾಡಲಿದ್ದಾರೆ. ಇದಕ್ಕೆ ಮುನ್ನವೇ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಈ ಕ್ರಮ ತೆಗೆದುಕೊಳ್ಳುವ ಮೂಲಕ ಪ್ಲಾಸ್ಟಿಕ್‌ ನಿಷೇಧದ ಆಂದೋಲನಕ್ಕೆ ಕೈಜೋಡಿಸಿದೆ.

 
ಆದೇಶದಲ್ಲಿ ಏನಿದೆ?

1. ದೇಶದ ಎಲ್ಲ ವಿವಿಗಳು, ಕಾಲೇಜುಗಳು, ಉನ್ನತ ಶಿಕ್ಷಣ ಸಂಸ್ಥೆಗಳು ಒಮ್ಮೆ ಮಾತ್ರ ಬಳಕೆ ಮಾಡಬಹುದಾದ ಪ್ಲಾಸ್ಟಿಕ್‌ ಅನ್ನು ತಮ್ಮ ಆವರಣದಿಂದ ಮುಕ್ತ ಮಾಡಬೇಕು.

2. ಸಿಂಗಲ್ ಬಳಕೆಯ ಪ್ಲಾಸ್ಟಿಕ್‌ಗೆ ಹೊರತಾದ, ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆಗಳನ್ನು ನೋಡಿಕೊಳ್ಳಬೇಕು.

3. ವಿವಿ ಆವರಣದಲ್ಲಿರುವ ಕ್ಯಾಂಟೀನ್‌ಗಳು, ಅಂಗಡಿಗಳು, ಹಾಸ್ಟೆಲ್ಗಳಲ್ಲೂ ಪ್ಲಾಸ್ಟಿಕ್‌ ನಿಷೇಧಿಸಬೇಕು.

4. ಮಣ್ಣಿನಲ್ಲಿ ಕರಗಿಹೋಗದಂಥ ಪ್ಲಾಸ್ಟಿಕ್‌ ವಸ್ತುಗಳನ್ನು ಶಿಕ್ಷಣ ಸಂಸ್ಥೆಯ ಆವರಣದೊಳಗೆ ತರದಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಬೇಕು.

5. ಪ್ಲಾಸ್ಟಿಕ್‌ ವಾಟರ್‌ ಬಾಟಲ್ ಬಳಕೆ ಮಾಡದಂತೆ, ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಬೇಕು. ಬಟ್ಟೆ ಬ್ಯಾಗ್‌ಗಳು, ಪೇಪರ್‌ ಬ್ಯಾಗ್‌ಗಳ ಬಳಕೆಗೆ ಆಸ್ಪದ ನೀಡಬೇಕು.

6. ವಿದ್ಯಾರ್ಥಿಗಳ ಮನೆಗಳಲ್ಲೂ ಒಮ್ಮೆ ಮಾತ್ರ ಬಳಕೆ ಮಾಡುವ ಪ್ಲಾಸ್ಟಿಕ್‌ ಬಳಸದಂತೆ ಪ್ರಭಾವ ಬೀರಬೇಕು.

7. ಶಿಕ್ಷಣ ಸಂಸ್ಥೆಗಳು ದತ್ತು ಪಡೆದಿರುವಂಥ ಹಳ್ಳಿಗಳಲ್ಲೂ ಪ್ಲಾಸ್ಟಿಕ್‌ ಮುಕ್ತ ವಾತಾವರಣ ನಿರ್ಮಿಸಲು ಶ್ರಮ ಹಾಕಬೇಕು.