ವಿಮಾನ ಇಂಧನದ ಬೆಲೆ 11% ಇಳಿಕೆ: ಏರ್‌ಲೈನ್‌ಗಳಿಗೆ ತುಸು ನಿರಾಳ

0
339

ವಿಮಾನ ಇಂಧನದ (ಎಟಿಎಫ್‌) ಬೆಲೆಗಳನ್ನು ತೈಲ ಕಂಪನಿಗಳು ಶೇ 11ರಷ್ಟು ಇಳಿಸಿದ್ದು ಸಂಕಷ್ಟದಲ್ಲಿದ್ದ ವೈಮಾನಿಕ ಸಂಸ್ಥೆಗಳಿಗೆ ತುಸು ನಿರಾಳವೆನಿಸಿದೆ. ಜೆಟ್ ಇಂಧನ

ಹೊಸದಿಲ್ಲಿ: ವಿಮಾನ ಇಂಧನದ (ಎಟಿಎಫ್‌) ಬೆಲೆಗಳನ್ನು ತೈಲ ಕಂಪನಿಗಳು ಶೇ 11ರಷ್ಟು ಇಳಿಸಿದ್ದು ಸಂಕಷ್ಟದಲ್ಲಿದ್ದ ವೈಮಾನಿಕ ಸಂಸ್ಥೆಗಳಿಗೆ ತುಸು ನಿರಾಳವೆನಿಸಿದೆ. 

ದಿಲ್ಲಿ ಮತ್ತು ಮುಂಬಯಿಯಲ್ಲಿ ಕಿಲೋ ಲೀಟರ್‌ (1,000 ಲೀ)  ಜೆಟ್ ಇಂಧನ ಬೆಲೆ 68,050 ರೂ ಹಾಗೂ 67,979 ರೂ.ಗಳಾಗಿವೆ. ಕಳೆದ ತಿಂಗಳು ಎರಡೂ ಮಹಾನಗರಗಳಲ್ಲಿ ಜೆಟ್‌ ಇಂಧನದ ಬೆಲೆ ಕ್ರಮವಾಗಿ 76,380 ರೂ ಹಾಗೂ 76,013.2 ರೂ ಆಗಿತ್ತು. 

ಜೆಟ್‌ ಇಂಧನದ ಬೆಲೆ ಬ್ರೆಂಟ್‌ ಕ್ರೂಡ್‌ ಆಯಿಲ್ ಬೆಲೆಗೆ ಅನುಗುಣವಾಗಿದ್ದು, ಎಟಿಎಫ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂದು ವಿಮಾನಯಾನ ಸಚಿವಾಲಯ ದೀರ್ಘ ಕಾಲದಿಂದ ಒತ್ತಾಯಿಸುತ್ತಿದೆ. ದೇಶೀಯ ವಿಮಾನಗಳು ಬಳಸುವ ಜೆಟ್‌ ಇಂಧನದ ಬೆಲೆ ಜಗತ್ತಿನಲ್ಲೇ ಅಧಿಕವಾಗಿದೆ. 

‘ಎಟಿಎಫ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸಬೇಕು; ಅಲ್ಲದೆ ಭಾರತೀಯ ವೈಮಾನಿಕ ಸಂಸ್ಥೆಗಳ ವಿಮಾನಗಳಿಗೆ ವಿದೇಶಗಳಲ್ಲೂ ಇನ್‌ಪುಟ್ ಟ್ಯಾಕ್ಸ್‌ ಕ್ರೆಡಿಟ್‌ ಸೌಲಭ್ಯ ನೀಡಬೇಕು ಎಂದು ನಾವು ವಿತ್ತಸಚಿವಾಲಯಕ್ಕೆ ಮನವಿ ಮಾಡಿದ್ದೇವೆ’ ಎಂದು ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಆರ್.ಎನ್ ಚೌಬೆ ತಿಳಿಸಿದರು.