ವಿಪ್ರೊ: ‘ವೈರಿ ಷೇರು’ ಮಾರಾಟ

0
404

ದೇಶದ ಮೂರನೇ ಅತಿದೊಡ್ಡ ಐಟಿ ಸಂಸ್ಥೆ ವಿಪ್ರೊದಲ್ಲಿನ ವೈರಿಗಳಿಗೆ ಸೇರಿದ್ದ ₹ 1,150 ಕೋಟಿ ಮೊತ್ತದ ಷೇರುಗಳನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಿದೆ.

ನವದೆಹಲಿ (ಪಿಟಿಐ): ದೇಶದ ಮೂರನೇ ಅತಿದೊಡ್ಡ ಐಟಿ ಸಂಸ್ಥೆ ವಿಪ್ರೊದಲ್ಲಿನ ವೈರಿಗಳಿಗೆ ಸೇರಿದ್ದ 1,150 ಕೋಟಿ ಮೊತ್ತದ ಷೇರುಗಳನ್ನು ಕೇಂದ್ರ ಸರ್ಕಾರವು ಮಾರಾಟ ಮಾಡಿದೆ.

ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಜನರಲ್‌ ಇನ್ಶೂರೆನ್ಸ್‌ ಕಾರ್ಪೊರೇಷನ್ ಮತ್ತು ದಿ ನ್ಯೂ ಇಂಡಿಯಾ ಇನ್ಶೂರೆನ್ಸ್‌ ಕಾರ್ಪೋರೇಷನ್‌ಗೆ ಈ ಷೇರುಗಳನ್ನು ಮಾರಾಟ ಮಾಡಲಾಗಿದೆ.

ವೈರಿಗಳ ಆಸ್ತಿ ಸಂರಕ್ಷಕ ಸಂಸ್ಥೆಯು (ಸಿಇಪಿ) 4.43 ಕೋಟಿಗೂ ಹೆಚ್ಚು ಷೇರುಗಳನ್ನು ಪ್ರತಿ ಷೇರಿಗೆ 258.90 ರಂತೆ ಮಾರಾಟ ಮಾಡಿದೆ. ಎಲ್‌ಐಸಿಯು 3.86 ಕೋಟಿ ಷೇರುಗಳನ್ನು ಖರೀದಿಸಿದೆ. ಈ ಷೇರು ಮಾರಾಟದಿಂದ ಬರುವ ಮೊತ್ತವನ್ನು ಕೇಂದ್ರ ಸರ್ಕಾರದ ಷೇರು ವಿಕ್ರಯ ಖಾತೆಗೆ ಸೇರ್ಪಡೆ ಮಾಡಲಾಗುವುದು.

ಪಾಕಿಸ್ತಾನ ಇಲ್ಲವೇ ಚೀನಾಕ್ಕೆ ವಲಸೆ ಹೋದ ಮತ್ತು ಭಾರತದ ಪ್ರಜೆಯಾಗಿರದವರ ಆಸ್ತಿಯನ್ನು ‘ವೈರಿ ಆಸ್ತಿ’ ಎಂದು ಪರಿಗಣಿಸಲಾಗುತ್ತಿದೆ. ವೈರಿ ಆಸ್ತಿ ಮತ್ತು ಷೇರುಗಳನ್ನು ವೈರಿಗಳ ಆಸ್ತಿ ಸಂರಕ್ಷಕ ಸಂಸ್ಥೆಯು ನೋಡಿಕೊಳ್ಳುತ್ತದೆ. ‘ವೈರಿ ಷೇರು’ಗಳನ್ನು ಮಾರಾಟ ಮಾಡುವುದಕ್ಕೆ ಕೇಂದ್ರ ಸರ್ಕಾರವು ಕಳೆದ ನವೆಂಬರ್‌ನಲ್ಲಿ ಅನುಮತಿ ನೀಡಿತ್ತು.