ವಿದ್ಯುತ್‌: ಪ್ರತಿ ಯೂನಿಟ್‌ಗೆ 14 ಪೈಸೆ ಹೆಚ್ಚಳ

0
618

ವಿದ್ಯುತ್‌ ದರ ಪ್ರತಿ ಯೂನಿಟ್‌ಗೆ 14 ಪೈಸೆಯಷ್ಟು ಹೆಚ್ಚಳವಾಗಲಿದೆ. ಈ ವರ್ಷ ದರ ಏರಿಕೆಯಾಗುತ್ತಿರುವುದು ಎರಡನೇ ಬಾರಿ. ಮೇ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 25ರಿಂದ 38 ಪೈಸೆ ಏರಿಕೆ ಮಾಡಲಾಗಿತ್ತು.

ಬೆಂಗಳೂರು: ವಿದ್ಯುತ್‌ ದರ ಪ್ರತಿ ಯೂನಿಟ್‌ಗೆ 14 ಪೈಸೆಯಷ್ಟು ಹೆಚ್ಚಳವಾಗಲಿದೆ. ಈ ವರ್ಷ ದರ ಏರಿಕೆಯಾಗುತ್ತಿರುವುದು ಎರಡನೇ ಬಾರಿ. ಮೇ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 25ರಿಂದ 38 ಪೈಸೆ ಏರಿಕೆ ಮಾಡಲಾಗಿತ್ತು. 

ಅಕ್ಟೋಬರ್. 1ರಿಂದ ಪರಿಷ್ಕೃತ ದರ ಜಾರಿಗೆ ಬರುವಂತೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವು ಎಲ್ಲ ವಿದ್ಯುತ್‌ ಪ್ರಸರಣ ನಿಗಮಗಳಿಗೆ (ಎಸ್ಕಾಂ) ಆದೇಶ ನೀಡಿದೆ. ಹೆಚ್ಚುವರಿ ಇಂಧನ ಹೊಂದಾಣಿಕೆ ಶುಲ್ಕವಾಗಿ (ಎಫ್‌ಎಸಿ) 14 ಪೈಸೆ ಸಂಗ್ರಹಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಒಟ್ಟಾರೆ ವಿದ್ಯುತ್‌ ಬಳಕೆದಾರರು ಪ್ರತಿ ಯೂನಿಟ್‌ಗೆ ಒಟ್ಟು (21+14 ಪೈಸೆ) ‌35 ಪೈಸೆಯಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು. 

ಈ ದರ ಡಿ. 31ರವರೆಗೆ ಇರಲಿದೆ. ಬಳಿಕ ದರ ಮತ್ತೆ ಪರಿಷ್ಕರಣೆಯಾಗಬಹುದು ಅಥವಾ ಆಗದೆಯೂ ಇರಬಹುದು. ಇಂಧನ ವೆಚ್ಚ (ವಿದ್ಯುತ್‌ ಸ್ಥಾವರಗಳಿಗೆ ಬಳಕೆಯಾಗುವ ಕಲ್ಲಿದ್ದಲಿನ ದರ) ಏರಿಕೆಯ ಮೇಲೆ ದರ ಹೆಚ್ಚಳ ಅವಲಂಬಿತವಾಗಿರುತ್ತದೆ. ದರ ಏರಿಕೆಯ ಪ್ರಮಾಣ ಒಂದು ಪ್ರಸರಣ ಕಂಪನಿಯಿಂದ ಇನ್ನೊಂದಕ್ಕೆ (ಎಸ್ಕಾಂಗಳಿಗೆ) ಭಿನ್ನವಾಗಿರುತ್ತದೆ ಎಂದು ತಿಳಿಸಿದರು.

ಕಳೆದ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ 6 ಪೈಸೆ, 2017ರ ಜುಲೈನಿಂದ 2018ರ ಮಾರ್ಚ್‌ವರೆಗೆ 15 ಪೈಸೆ ಇಂಧನ ಹೊಂದಾಣಿಕೆ ಶುಲ್ಕ ಸಂಗ್ರಹಿಸಲಾಗಿತ್ತು. ಸದ್ಯ ಕಲ್ಲಿದ್ದಲು ಕೊರತೆಯಿದೆ. ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಸಾಗಾಟ ಸಮಸ್ಯೆಗಳೂ ಎದುರಾಗಿವೆ. ಕಳೆದ ತ್ರೈಮಾಸಿಕಕ್ಕಿಂತ ಈ ತ್ರೈಮಾಸಿಕದಲ್ಲಿ  94 ಕೋಟಿಯಷ್ಟು ಆರ್ಥಿಕ ಹೊರೆ ಬಿದ್ದಿದೆ. ಹೀಗಾಗಿ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿ ತಿಳಿಸಿದರು.