ವಿದೇಶಿ ಸ್ಟೆಂಟ್‌ಗೆ ಏನೂ ಕಡಿಮೆಯಿಲ್ಲ ದೇಶೀ ಸ್ಟೆಂಟ್ ಗುಣಮಟ್ಟ

0
280

ಭಾರತದಲ್ಲಿ ತಯಾರಾಗುವ ಸ್ಟೆಂಟ್‌ಗಳ ಗುಣಮಟ್ಟ ಯಾವುದೇ ವಿದೇಶಿ ಬ್ರ್ಯಾಂಡ್‌ನ ಸ್ಟೆಂಟ್‌ಗಿಂತ ಕಡಿಮೆಯಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಹೊಸದಿಲ್ಲಿ: ಭಾರತದಲ್ಲಿ ತಯಾರಾಗುವ ಸ್ಟೆಂಟ್‌ಗಳ ಗುಣಮಟ್ಟ ಯಾವುದೇ ವಿದೇಶಿ ಬ್ರ್ಯಾಂಡ್‌ನ ಸ್ಟೆಂಟ್‌ಗಿಂತ ಕಡಿಮೆಯಿಲ್ಲ ಎಂದು ಅಧ್ಯಯನ ವರದಿಯೊಂದು ಹೇಳಿದೆ. 

ದೇಶದಲ್ಲಿ ಹೃದಯರೋಗಿಗಳಿಗೆ ಅಳವಡಿಸಲಾಗುವ ಸ್ಟೆಂಟ್‌ಗಳ ಬೆಲೆಯಲ್ಲಿ ಕಳೆದ ವರ್ಷ ಕೇಂದ್ರ ಸರಕಾರ ಶೇ. 75 ಇಳಿಕೆ ಮಾಡಿದ ಬೆನ್ನಲ್ಲೇ ಅವುಗಳ ಗುಣಮಟ್ಟ ಕುರಿತು ವಿವಿಧ ಸಂಸ್ಥೆಗಳು ಸಂಶಯ ವ್ಯಕ್ತಪಡಿಸಿದ್ದವು. 

ಜತೆಗೆ ದೇಶದಲ್ಲಿ ಸ್ಟೆಂಟ್‌ ಮಾರಾಟ ಮಾಡುತ್ತಿದ್ದ ವಿವಿಧ ವಿದೇಶಿ ಬ್ರ್ಯಾಂಡ್‌ಗಳು ಸ್ಟೆಂಟ್ ಪೂರೈಸುವುದಿಲ್ಲ. ಅವುಗಳ ಗುಣಮಟ್ಟ ಮತ್ತು ಬೆಲೆ ಭಾರತದಲ್ಲಿ ತಯಾರಾಗುವ ಸ್ಟೆಂಟ್‌ಗಳಿಗಿಂತ ಉನ್ನತ ಮಟ್ಟದ್ದು ಎಂದು ಹೇಳಲಾಗಿತ್ತು. 

ಆದರೆ ದೇಶದಲ್ಲಿ ತಯಾರಾಗುವ ಯುಕೋನ್ ಚಾಯ್ಸ್ ಪಿಸಿ ಮತ್ತು ಅಮೆರಿಕನ್ ಕಂಪನಿ ಅಬ್ಬೋಟ್ಟ್ ತಯಾರಿಸುವ ಕ್ಸಿಯೆನ್ಸ್ ಸ್ಟೆಂಟ್‌ಗೆ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಒಂದೇ ಗುಣಮಟ್ಟ ಮತ್ತು ಸಾಮರ್ಥ್ಯ ಹೊಂದಿವೆ ಎಂದು ಅಧ್ಯಯನ ನಡೆಸಿದ ಜರ್ಮನಿಯ ಹೃದ್ರೋಗತಜ್ಞರ ತಂಡ ವರದಿ ನೀಡಿದೆ. 

ಇದರೊಂದಿಗೆ ದೇಶದಲ್ಲಿನ ಮಾರಾಟವಾಗುವ ಸ್ಟೆಂಟ್‌ಗಳ ಬೆಲೆ ಕಡಿಮೆಯಿದ್ದರೂ, ಅವು ಅತ್ಯುತ್ತಮವಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ತಜ್ಞರು ವರದಿ ನೀಡಿದ್ದು, ಸ್ಟೆಂಟ್‌ಗಳಿಗೆ ಬ್ರ್ಯಾಂಡ್‌ ಹೆಸರಿನಡಿ ದುಬಾರಿ ದರ ವಿಧಿಸಿ ಸುಲಿಗೆ ಮಾಡುತ್ತಿದ್ದ ಅಮೆರಿಕದ ಕಂಪನಿಗಳಿಗೆ ಮುಖಭಂಗವಾಗಿದೆ. 

ದೇಶದಲ್ಲಿ ಹೃದ್ರೋಗಿಗಳಿಗೆ ಅಳವಡಿಸುವ ದೇಶೀ ನಿರ್ಮಿತ ಸ್ಟೆಂಟ್ ಮತ್ತು ಅಮೆರಿಕ ಸ್ಟೆಂಟ್‌ಗಳನ್ನು ತಜ್ಞರು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಬಳಿಕ ವರದಿಯನ್ನು ಶಿಕಾಗೋದಲ್ಲಿ ನಡೆದ ಅಮೆರಿಕನ್ ಹಾರ್ಟ್ ಅಸೋಶಿಯೇಶನ್‌ ಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ. ಅಧ್ಯಯನಕ್ಕಾಗಿ 2,603 ರೋಗಿಗಳ ವರದಿಯನ್ನು ಬಳಸಿಕೊಳ್ಳಲಾಗಿದೆ.