ವಿದೇಶಿ ದೇಣಿಗೆ ದುರ್ಬಳಕೆ : ಸುಪ್ರೀಂ ಕೋರ್ಟ್‌ನ ವಕೀಲೆ ಇಂದಿರಾ ಜೈಸಿಂಗ್‌ ಮನೆ, ಕಚೇರಿಯಲ್ಲಿ ಸಿಬಿಐ ಶೋಧ

0
14

ವಿದೇಶಿ ದೇಣಿಗೆ ಕಾನೂನು ಉಲ್ಲಂಘನೆ ಆರೋಪದಲ್ಲಿ ಸುಪ್ರೀಂಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಮತ್ತು ಪತಿ ಆನಂದ್ ಗ್ರೋವರ್ ನಿವಾಸದ ಮೇಲೆ ಸಿಬಿಐ ಗುರುವಾರ ದಾಳಿ ನಡೆಸಿದೆ.

ನವದೆಹಲಿ: ವಿದೇಶಿ ದೇಣಿಗೆ ಕಾನೂನು ಉಲ್ಲಂಘನೆ ಆರೋಪದಲ್ಲಿ ಸುಪ್ರೀಂಕೋರ್ಟ್ ವಕೀಲೆ ಇಂದಿರಾ ಜೈಸಿಂಗ್ ಮತ್ತು ಪತಿ ಆನಂದ್ ಗ್ರೋವರ್ ನಿವಾಸದ ಮೇಲೆ ಸಿಬಿಐ ಜುಲೈ 11 ರ ಗುರುವಾರ ದಾಳಿ ನಡೆಸಿದೆ.

ದೆಹಲಿಯ ನಿಜಾಮುದ್ದೀನ್ ರಸ್ತೆಯಲ್ಲಿರುವ ಇಂದಿರಾರ ನಿವಾಸ ಅವರ ಎನ್​ಜಿಒ ಲಾಯರ್ಸ್ ಕಲೆಕ್ಟಿವ್​ನ ಕಚೇರಿ ಮತ್ತು ಮುಂಬೈನಲ್ಲಿರುವ ಎನ್​ಜಿಒ ಕಚೇರಿ ಮೇಲೆ ಬೆಳಗಿನ ಜಾವ 5 ಗಂಟೆಗೆ ಸಿಬಿಐ ದಾಳಿ ಮಾಡಿದೆ. ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ(ಎಫ್​ಸಿಆರ್​ಎ) ಉಲ್ಲಂಘನೆಗೆ ಸಂಬಂಧಿಸಿದಂತೆ ಜೈಸಿಂಗ್ ಪತಿ ಆನಂದ್ ಗ್ರೋವರ್ ಮತ್ತು ಎನ್​ಜಿಒ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಗೃಹ ಸಚಿವಾಲಯದ ದೂರಿನ ಅನ್ವಯ ಸಿಬಿಐ ಎಫ್​ಐಆರ್ ದಾಖಲಿಸಿದ್ದು, ಇದರಲ್ಲಿ ಇಂದಿರಾರನ್ನು ಆರೋಪಿ ಎಂದು ಎಲ್ಲೂ ನಮೂದಿಸಿಲ್ಲ. ಆದರೆ ಅವರು ಆಪಾದಿತ ಪಾತ್ರವನ್ನು ವಹಿಸಿದ್ದಾರೆಂದು ಹಲವು ಬಾರಿ ಉಲ್ಲೇಖಿಸಲಾಗಿದೆ. ಜೈಸಿಂಗ್ ಲಾಯರ್ಸ್ ಕಲೆಕ್ಟಿವ್​ನಿಂದ 96.60 ಲಕ್ಷ ರೂ. ಸಂಭಾವನೆ ಪಡೆದುಕೊಂಡಿದ್ದಾರೆ.

ಆನಂದ್ ಗ್ರೋವರ್ ಮತ್ತು ಅವರ ಎನ್​ಜಿಒ ವಿರುದ್ಧ ವಿದೇಶಿ ದೇಣಿಗೆ ದುರ್ಬಳಕೆ ಆರೋಪವಿದೆ. ಗೃಹ ಸಚಿವಾಲಯದ ದೂರಿನಲ್ಲಿ 2006-2014ರ ಅವಧಿಯಲ್ಲಿ ಎನ್​ಜಿಒಗೆ 32 ಕೋಟಿ ರೂ. ವಿದೇಶಿ ದೇಣಿಗೆ ಸಿಕ್ಕಿದೆ. 2010ರಲ್ಲಿ ಅಕ್ರಮಗಳ ಬಗ್ಗೆ ಮೊದಲ ಬಾರಿ ತಿಳಿದು ಬಂದಿತು. ಇಂದಿರಾ ಜೈಸಿಂಗ್ 2009-14ರ ಅವಧಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದಾಗ, ಅವರ ವಿದೇಶಿ ಪ್ರವಾಸಗಳ ಖರ್ಚನ್ನು ಎನ್​ಜಿಒದಿಂದ ಭರಿಸಲಾ ಗಿತ್ತು. ಇದಕ್ಕೆ ಗೃಹ ಸಚಿವಾಲಯದಿಂದ ಅನುಮತಿ ಪಡೆದುಕೊಂಡಿರಲಿಲ್ಲ. ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಜೈಸಿಂಗ್, ಆನಂದ್ ಮತ್ತು ತಮ್ಮನ್ನು ಮಾನವ ಹಕ್ಕು ಸಂರಕ್ಷಣೆ ಹೋರಾಟದ ಕಾರಣದಿಂದ ಗುರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಎನ್​ಜಿಒ ಈ ಆರೋಪವನ್ನು ತಳ್ಳಿ ಹಾಕಿದೆ.