ವಿತ್ತೀಯ ಹೊಣೆ: ನಕಾರಾತ್ಮಕ ಮುನ್ನೋಟ (ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಅಂದಾಜು)

0
10

ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಭಾರತದ ಸ್ಥಾನಮಾನವು ಮುಂಬರುವ ದಿನಗಳಲ್ಲಿ ಸ್ಥಿರತೆಯಿಂದ ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಅಂದಾಜಿಸಿದೆ.

ನವದೆಹಲಿ (ಪಿಟಿಐ): ವಿತ್ತೀಯ ಹೊಣೆಗಾರಿಕೆ ನಿಭಾಯಿಸುವ ಭಾರತದ ಸ್ಥಾನಮಾನವು ಮುಂಬರುವ ದಿನಗಳಲ್ಲಿ ಸ್ಥಿರತೆಯಿಂದ ನಕಾರಾತ್ಮಕ ಮಟ್ಟದಲ್ಲಿ ಇರಲಿದೆ ಎಂದು ಜಾಗತಿಕ ಮೌಲ್ಯಮಾಪನ ಸಂಸ್ಥೆ ಮೂಡೀಸ್‌ ಇನ್‌ವೆಸ್ಟರ್ಸ್‌ ಸರ್ವಿಸ್‌ ಅಂದಾಜಿಸಿದೆ.

ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತದ ಆರ್ಥಿಕ ವೃದ್ಧಿ ದರವು ಮುಂಬರುವ ದಿನಗಳಲ್ಲಿಯೂ ಕೆಳಮಟ್ಟದಲ್ಲಿಯೇ ಇರಲಿರುವುದರಿಂದ ಸ್ಥಾನಮಾನ ತಗ್ಗಿಸಲಾಗಿದೆ. ಆರ್ಥಿಕ ಮತ್ತು ಸಾಂಸ್ಥಿಕ ಸವಾಲುಗಳನ್ನು ದೀರ್ಘಾವಧಿಯಲ್ಲಿ ಎದುರಿಸುವಲ್ಲಿ ಸರ್ಕಾರದ ಧೋರಣೆಯ ಮತ್ತು ನೀತಿ ನಿರೂಪಣೆಯ ವೈಫಲ್ಯಗಳ ಫಲಶ್ರುತಿ ಇದಾಗಿದೆ. ಇದರಿಂದಾಗಿ ಈಗಾಗಲೇ ಗರಿಷ್ಠ ಮಟ್ಟದಲ್ಲಿ ಇರುವ ಸರ್ಕಾರಿ ಸಾಲದ ಹೊರೆಯು ಇನ್ನಷ್ಟು ಹೆಚ್ಚಲಿದೆ. ವಿದೇಶಿ ಬಾಂಡ್ ಮೂಲಕ ಸಾಲ ಸಂಗ್ರಹಿಸುವ ಕೇಂದ್ರ ಸರ್ಕಾರದ ಉದ್ದೇಶ ಕಾರ್ಯಗತಗೊಳ್ಳುವುದು ಕಠಿಣವಾಗಲಿದೆ.

ವಿತ್ತೀಯ ಕೊರತೆ ಹೆಚ್ಚಳ: ಪ್ರಸಕ್ತ ಸಾಲಿನ ವಿತ್ತೀಯ ಕೊರತೆಯು ಸರ್ಕಾರದ ಗುರಿಯಾಗಿರುವ ಜಿಡಿಪಿಯ ಶೇ 3.3ರ ಬದಲಿಗೆ ಶೇ 3.7ರಷ್ಟಕ್ಕೆ ಏರಿಕೆಯಾಗಲಿದೆ. ಆರ್ಥಿಕ ಬೆಳವಣಿಗೆಯಲ್ಲಿನ ತೀವ್ರ ಸ್ವರೂಪದ ನಿಧಾನಗತಿ ಮತ್ತು ಕಾರ್ಪೊರೇಟ್‌ ತೆರಿಗೆ ಕಡಿತವು ಸರ್ಕಾರದ ಹಣಕಾಸು ಪರಿಸ್ಥಿತಿಯನ್ನು ಬಿಗಡಾಯಿಸಲಿದೆ ಎಂದು ಮೂಡೀಸ್‌ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ಫೊಸಿಸ್‌, ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಸ್ಥಾನಮಾನದ ಮುನ್ನೋಟವನ್ನೂ ಮೂಡೀಸ್‌ ‘ನಕಾರಾರಾತ್ಮಕ’ ಎಂದು ವರ್ಗೀಕರಿಸಿದೆ. ವಿದೇಶಿ ಕರೆನ್ಸಿ ಮತ್ತು ಸ್ಥಳೀಯ ಕರೆನ್ಸಿಯ ದೀರ್ಘಾವಧಿ ರೇಟಿಂಗ್‌ ‘ಬಿಎಎ2’ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಆರ್ಥಿಕತೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಆರ್ಥಿಕ ಪ್ರಗತಿಯಲ್ಲಿನ ಮಂದಗತಿಯು ತೀವ್ರಗೊಳ್ಳುವುದನ್ನು ನಿರ್ಬಂಧಿಸಿವೆ. ಆದರೆ, ಗ್ರಾಮೀಣ ಕುಟುಂಬಗಳಲ್ಲಿನ ಹಣಕಾಸು ಸಂಕಷ್ಟ, ಹೊಸ ಉದ್ಯೋಗ ಸೃಷ್ಟಿ ನಿಧಾನಗೊಂಡಿರುವುದು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು, ಆರ್ಥಿಕತೆಯಲ್ಲಿನ ನಿಧಾನಗತಿಗೆ ಇನ್ನಷ್ಟು ವೇಗ ನೀಡಲಿವೆ. ‘ಎನ್‌ಬಿಎಫ್‌ಸಿ’ ಬಿಕ್ಕಟ್ಟು ಸದ್ಯದಲ್ಲೇ ದೂರವಾಗಲಿದೆ ಎಂದೇನೂ ಮೂಡೀಸ್‌ ಪರಿಗಣಿಸಿಲ್ಲ.

2017ರಲ್ಲಿ ಮೂಡೀಸ್‌, 14 ವರ್ಷಗಳ ಬಳಿಕ ಭಾರತದ ಹಣಕಾಸು ಮತ್ತು ಸಾಲದ ಬದ್ಧತೆ ಈಡೇರಿಸುವ ಸಾಮರ್ಥ್ಯದ ಸ್ಥಾನಮಾನವನ್ನು ಮೇಲ್ದರ್ಜೆಗೇರಿಸಿತ್ತು. ಈಗ ದೇಶಿ ಆರ್ಥಿಕತೆಯ ಕಳಪೆ ಸಾಧನೆ ಪರಿಗಣಿಸಿ ಅದರ ಸ್ಥಾನಮಾನವನ್ನು ತಗ್ಗಿಸಿದೆ.