ವಿಜ್ಞಾನದ ವಿದ್ಯಾರ್ಥಿಗಳನ್ನು ಬೆಸೆಯುವ ‘ಸೈನ್ಸ್‌ ಇಂಡಿಯಾ’ ವೆಬ್‌

0
821

ದೇಶದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಮೂಲಕ ವಿಜ್ಞಾನದ ಬಗ್ಗೆ ಮಾರ್ಗದರ್ಶನ ನೀಡುವ ವೆಬ್‌ಪೋರ್ಟಲ್‌ ‘ಸೈನ್ಸ್‌ ಇಂಡಿಯಾ’ವನ್ನು ವಿಜ್ಞಾನ ಭಾರತಿ ಆರಂಭಿಸಿದೆ.

ಬೆಂಗಳೂರು: ದೇಶದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ ಆನ್‌ಲೈನ್‌ ಮೂಲಕ ವಿಜ್ಞಾನದ ಬಗ್ಗೆ ಮಾರ್ಗದರ್ಶನ ನೀಡುವ ವೆಬ್‌ಪೋರ್ಟಲ್‌ ‘ಸೈನ್ಸ್‌ ಇಂಡಿಯಾ’ವನ್ನು ವಿಜ್ಞಾನ ಭಾರತಿ ಆರಂಭಿಸಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಉಪಯೋಗ ಪಡೆಯಬಹುದು. ಪ್ರತಿಯೊಂದು ಶಾಲೆಯೂ ‘ಸೈನ್ಸ್‌ ಇಂಡಿಯಾ’ ಪೋರ್ಟಲ್‌ ಅನ್ನು ಸಕ್ರಿಯವಾಗಿ ಬಳಸಬೇಕು ಎಂದು ‘ವಿಜ್ಞಾನ ಭಾರತಿ’ ಅಧ್ಯಕ್ಷ ವಿಜಯ್ ಭಟ್ಕರ್‌ ಇತ್ತೀಚೆಗೆ ಲಖನೌನಲ್ಲಿ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಬಗೆಯ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬಹುದು. ಅಲ್ಲದೆ, ಹೊಸ ಪರಿಕಲ್ಪನೆಗಳು, ಸಂಶೋಧನೆಗಳು, ಹೊಸ ವಿಷಯಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹಂಚಿಕೊಳ್ಳ
ಬಹುದು ಎಂದು ಅವರು ಹೇಳಿದರು.
ಅಲ್ಲದೆ, ದೇಶದ ಪ್ರಮುಖ ವಿಜ್ಞಾನಿಗಳ ಲಿಂಕ್ ಕೊಡಲಾಗುತ್ತದೆ. ಅವರಿಗೂ ನೇರವಾಗಿ ಕೆಲವು ಪ್ರಶ್ನೆಗಳನ್ನು ಕೇಳಲು ಅವಕಾಶ ಇದೆ. ಜ್ಞಾನಕ್ಕಾಗಿ ಹಂಬಲಿಸುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆ ಆಗುತ್ತದೆ. ಈ ಮೂಲಕ, ವಿಜ್ಞಾನ ಮತ್ತು ಗಣಿತ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಸಾಧ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಈ ವೆಬ್‌ಪೋರ್ಟಲ್‌ನಿಂದ ಆಗುವ ಮತ್ತೊಂದು ಪ್ರಯೋಜನವೆಂದರೆ, ದೇಶದ ಎಲ್ಲ ಪ್ರತಿಭಾವಂತ ವಿಜ್ಞಾನ ಆಸಕ್ತ ವಿದ್ಯಾರ್ಥಿಗಳನ್ನು ಒಂದೇ ಕಡೆ ಸೇರಿಸಲು ಮತ್ತು ಚರ್ಚಿಸಲು ಇದು ಉತ್ತಮ ವೇದಿಕೆಯಾಗಲಿದೆ ಎಂದು ಭಟ್ಕರ್‌ ಹೇಳಿದರು.

ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಕುತೂಹಲ ಬೆಳೆಸಲು ಮತ್ತು ಆ ಕುತೂಹಲವನ್ನು ಪೋಷಿಸಿಕೊಂಡು ಹೋಗಲು ಇದೊಂದು ಉತ್ತಮ ತಂತ್ರಜ್ಞಾನ. ಇದರಿಂದ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳಲು ಸಾಧ್ಯ ಎಂದರು.

ವೆಬ್‌ಪೋರ್ಟಲ್‌ ವಿಳಾಸ: www.scienceindia.in 

ವಿದ್ಯಾರ್ಥಿಗಳು ಏನು ಮಾಡಬಹುದು?

* ತಾವು ಬರೆದ ವಿಜ್ಞಾನದ ಲೇಖನಗಳು ಮತ್ತು ಬ್ಲಾಗ್‌ಗಳನ್ನು ಇದರಲ್ಲಿ ಪ್ರಕಟಿಸಬಹುದು

* ಹೊಸ ಪರಿಕಲ್ಪನೆಗಳು, ಆ ದಿಸೆಯಲ್ಲಿ ನಡೆಸಿದ ಪ್ರಯೋಗಗಳ ಬಗ್ಗೆ ಚರ್ಚಿಸಬಹುದು

* ರಾಷ್ಟ್ರ ಮಟ್ಟದ ವಿಜ್ಞಾನಿಗಳ ಜತೆಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯ

* ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕು

ದೇಶದ ಸಾವಿರಾರು ವಿಜ್ಞಾನಿಗಳು ಮತ್ತು ವಿಜ್ಞಾನದ ಸಂಸ್ಥೆಗಳು ಕೈಜೋಡಿಸಲಿವೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನ ಆಗಲಿದೆ ಡಾ. ಹರ್ಷವರ್ಧನ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ