ವಿಐಪಿಗಳಿಗೆ 12 ಸಾವಿರ ಫಾಸ್ಟ್​ ಟ್ಯಾಗ್

0
526

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್​ಗಳಲ್ಲಿ ನೇರ ಪ್ರವೇಶಕ್ಕಾಗಿ (ಫ್ರೀ ರೈಡ್) ವಿಐಪಿಗಳಿಗೆ 12 ಸಾವಿರ ಫಾಸ್ಟ್​ ಟ್ಯಾಗ್ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್​ಗಳಲ್ಲಿ ನೇರ ಪ್ರವೇಶಕ್ಕಾಗಿ (ಫ್ರೀ ರೈಡ್) ವಿಐಪಿಗಳಿಗೆ 12 ಸಾವಿರ ಫಾಸ್ಟ್​ ಟ್ಯಾಗ್ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಸರ್ಕಾರ ಗುರುತಿಸಿರುವ ಆಯ್ದ ವಿಐಪಿಗಳಿಗೆ ಟೋಲ್​ಗಳಲ್ಲಿ ಈಗಾಗಲೇ ಉಚಿತ ಪ್ರವೇಶ ನೀಡಲಾ ಗುತ್ತಿದೆ. ಆದರೆ ಸಂಬಂಧಪಟ್ಟ ಗುರುತಿನ ಚೀಟಿಗಳನ್ನು ತೋರಿಸಬೇಕಾಗುತ್ತದೆ ಅಥವಾ ಸರ್ಕಾರಿ ವಾಹನವಾಗಿರಬೇಕು.

ಈ ಸಂದರ್ಭದಲ್ಲಿ ಟೋಲ್​ಗಳಲ್ಲಿ ವಿಐಪಿಗಳಿಗೆ ಕಿರಿಕಿರಿಯಾಗುತ್ತಿದೆ ಎನ್ನುವ ದೂರುಗಳು ಕೇಳಿಬಂದಿತ್ತು. ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಕೂಡ ಈ ಕುರಿತು ಅಸಾಮಾಧಾನ ವ್ಯಕ್ತಪಡಿಸಿತ್ತು. ಇದಲ್ಲದೇ ವಿಐಪಿಗಳ ಹೆಸರಲ್ಲಿ ಕೆಲವರು ಫ್ರೀ ರೈಡ್ ಅವಕಾಶವನ್ನು ದುರುಪಯೋಗಪಡಿಸಿ ಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಪ್ರಾಧಿಕಾರದ ಪ್ರಕಾರ ಟೋಲ್​ಗಳಲ್ಲಿ ಪ್ರತಿ ದಿನ ಸುಮಾರು 25 ಲಕ್ಷ ರೂ. ಟೋಲ್ ಸಂಚಾರ ಮೊತ್ತ ಸಂಗ್ರಹವಾಗುತ್ತದೆ. ಇದೇ ಸಂದರ್ಭದಲ್ಲಿ ದಿನವೊಂದಕ್ಕೆ 1 ಲಕ್ಷ ವಹಿವಾಟಿನಷ್ಟು ಫ್ರೀ ರೈಡ್ ವಾಹನಗಳು ಟೋಲ್ ಮೂಲಕ ಹಾದುಹೋಗುತ್ತವೆ. ಇದು ಆದಾಯ ಕೊರತೆಗೂ ಕಾರಣ ವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಸೂಚಿಸಿದ್ದರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ವಿಐಪಿಗಳಿಗೆ ಶುಲ್ಕ ಪಾವತಿ ರಹಿತ ಫಾಸ್ಟ್​ ಟ್ಯಾಗ್ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆರಂಭಿಕ ಹಂತದಲ್ಲಿ ಎಲ್ಲ ಸಂಸದರಿಗೆ ತಲಾ 2 ಫಾಸ್ಟ್​ ಟ್ಯಾಗ್ ನೀಡಲಾಗುತ್ತದೆ. ಒಂದು ದೆಹಲಿಯಲ್ಲಿ ಸಂಚರಿಸುವ ವಾಹನಕ್ಕೆ, ಮತ್ತೊಂದು ಸಂಸದರ ಸ್ಥಳೀಯ ಬಳಕೆ ವಾಹನಕ್ಕೆಂದು ತಿಳಿದುಬಂದಿದೆ.