ವಾರ್ಡ್ ಮೀಸಲು–ಕ್ಷೇತ್ರ ಮರುವಿಂಗಡಣೆ ಪಟ್ಟಿ, 12ರೊಳಗೆ ಆಯೋಗಕ್ಕೆ ನೀಡಿ: ಹೈಕೋರ್ಟ್‌

0
27

ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ಇದೇ 12ರೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮೌಖಿಕ ನಿರ್ದೇಶನ ನೀಡಿದೆ.

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ವಾರ್ಡ್ ಮೀಸಲು ಹಾಗೂ ಕ್ಷೇತ್ರ ಮರುವಿಂಗಡಣೆ ಪಟ್ಟಿಯನ್ನು ಇದೇ ಜೂನ್ 12ರೊಳಗೆ ರಾಜ್ಯ ಚುನಾವಣಾ ಆಯೋಗಕ್ಕೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಮೌಖಿಕ ನಿರ್ದೇಶನ ನೀಡಿದೆ.

‘ಪಟ್ಟಿ ಸಲ್ಲಿಸಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಈ ದಿಸೆಯಲ್ಲಿ ನಗರಾಭಿವೃದ್ಧಿ ಇಲಾಖೆಗೆ ತಕ್ಷಣ ನಿರ್ದೇಶನ ನೀಡಬೇಕು’ ಎಂದು ಕೋರಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ರಿಟ್ ಅರ್ಜಿಯನ್ನು ಮುಖ್ಯ‌ ನ್ಯಾಯಮೂರ್ತಿ ದಿನೇಶ್ ‌ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ 2018 ಜೂನ್ 6 ರ ಗುರುವಾರ ವಿಚಾರಣೆ ನಡೆಸಿತು.

‘ಒಂದು ವೇಳೆ ಪಟ್ಟಿ ಕೊಡದೇ ಹೋದಲ್ಲಿ ಚುನಾವಣೆ ಘೋಷಣೆ ಹಾಗೂ ಚುನಾವಣೆಯನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಕೋರ್ಟ್‌ ತನ್ನ ಆದೇಶ ಪ್ರಕಟಿಸಲಿದೆ’ ಎಂದೂ ನ್ಯಾಯಪೀಠ ಎಚ್ಚರಿಸಿದೆ.

ವಿಚಾರಣೆ ವೇಳೆ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ, ‘ಮೇ 30ರೊಳಗೆ ಪಟ್ಟಿ ಕೊಡುತ್ತೇವೆ ಎಂದು ಸರ್ಕಾರ ಹೇಳಿತ್ತು. ಆದರೆ ಇನ್ನೂ ಕೊಟ್ಟಿಲ್ಲ. ಈ ತಿಂಗಳ 15ರೊಳಗೆ ಚುನಾವಣೆ ಸಿದ್ಧತೆಗೆ ಅಧಿಸೂಚನೆ ಹೊರಡಿಸುವ ತುರ್ತು ಅಗತ್ಯವಿದ್ದು, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, ‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿತ್ತು. ಆದ್ದರಿಂದ ವಿಳಂಬವಾಗಿದೆ’ ಎಂದು ಹೇಳಿದರು.

ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಫಣೀಂದ್ರ, ‘ಸ್ವಾಮಿ, ನಾವು ಫೆಬ್ರುವರಿಯಲ್ಲೇ ರಿಟ್‌ ಅರ್ಜಿ ಹಾಕಿದ್ದೇವೆ. ಮೇ 30ರೊಳಗೆ ಕೊಡುತ್ತೇವೆ ಎಂದು ಸರ್ಕಾರವೇ ಪ್ರಮಾಣ ಪತ್ರ ಸಲ್ಲಿಸಿತ್ತು. ಹೀಗಿರುವಾಗ ನೀತಿ ಸಂಹಿತೆ ಅಡ್ಡಿಯ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ’ ಎಂದು ಪ್ರಶ್ನಿಸಿದರು.

ಸರ್ಕಾರಿ ವಕೀಲರು ಇದಕ್ಕೆ ಸಮಜಾಯಿಸಿ ಕೊಡಲು ಪ್ರಯತ್ನಿಸಿದರಲ್ಲದೇ, ‘ಮೊನ್ನೆಯಷ್ಟೇ ಮಂತ್ರಿಮಂಡಲ ರಚನೆಯಾಗಿದೆ. ಇಲಾಖೆಗೆ ಕಾರ್ಯದರ್ಶಿಯೂ ಇರಲಿಲ್ಲ. ಇನ್ನೂ ಮೂರು ವಾರಗಳ ಸಮಯಾವಕಾಶ ಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ ‘ಕೋರ್ಟ್‌ ಇದಕ್ಕೆ ಯಾವ ರೀತಿ ಸಹಾಯ ಮಾಡಬಹುದು ಎಂಬುದನ್ನು ನೀವೇ ಹೇಳಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ವಿಚಾರಣೆಯನ್ನು ಇದೇ ಜೂನ್ 12ಕ್ಕೆ ಮುಂದೂಡಿದೆ.

ಆಯೋಗದ ಅರ್ಜಿಯಲ್ಲಿ ಏನಿದೆ?

‘ಇದೇ ವರ್ಷದ ಸೆಪ್ಟೆಂಬರ್ ಹಾಗೂ 2019ರ ಫೆಬ್ರುವರಿ ಅಂತ್ಯದೊಳಗೆ ನಗರಸಭೆ, ಪಟ್ಟಣ ಪಂಚಾಯ್ತಿ, ಕಾರ್ಪೊರೇಷನ್ ಒಳಗೊಂಡಂತೆ 116 ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾಗಲಿದೆ. ಮುಂದಿನ ಚುನಾವಣೆಗೆ ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆಯ ಪರಿಷ್ಕೃತ ಪಟ್ಟಿಯನ್ನು ಆಯೋಗವು ಒಂದು ವರ್ಷಕ್ಕೂ ಮೊದಲೇ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಈ ಕುರಿತು ಆಯೋಗವು ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಹಲವು ಬಾರಿ ಪತ್ರ ಬರೆದು ಕೋರಿಕೆ‌ ಸಲ್ಲಿಸಿದೆ. ಆದರೂ ಸಲ್ಲಿಸಿಲ್ಲ. ನಿರ್ಧರಿತ ಸಮಯದಲ್ಲಿ ಚುನಾವಣೆ ನಡೆಸಬೇಕಿರುವುದು ಆಯೋಗದ ಕರ್ತವ್ಯ. ಒಂದು ವೇಳೆ ಚುನಾವಣೆ ನಡೆಸುವುದು ವಿಳಂಬವಾದರೆ,‌ ಅದು ಸಾಂವಿಧಾನಿಕ ಉಲ್ಲಂಘನೆಯಾಗಲಿದೆ’ ಎಂದು ಆಕ್ಷೇಪಿಸಿ ಆಯೋಗ ಈ ಅರ್ಜಿ ಸಲ್ಲಿಸಿದೆ.

2018ರ ಫೆಬ್ರುವರಿ 5ರಂದು ಈ ರಿಟ್‌ ಅರ್ಜಿ ಸಲ್ಲಿಸಲಾಗಿದೆ.

ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ 2013ರ ಮಾರ್ಚ್‌ನಲ್ಲಿ ಚುನಾವಣೆ ನಡೆದು, ಅದೇ ತಿಂಗಳ 11ರಂದು ಫಲಿತಾಂಶ ಪ್ರಕಟವಾಗಿತ್ತು. ಈ ಸಂಸ್ಥೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳ ಅಧಿಕಾರವಧಿ ಐದು ವರ್ಷ.‌

* ರಾಜ್ಯ ಸರ್ಕಾರವು ನಿಗದಿತ ಸಮಯದೊಳಗೆ ಚುನಾವಣಾ ಆಯೋಗಕ್ಕೆ ಪಟ್ಟಿ ನೀಡದೇ ಹೋದರೆ ನಾವೇನೂ ಮಾಡಲು ಸಾಧ್ಯವಿಲ್ಲ

–ದಿನೇಶ್‌ ಮಾಹೇಶ್ವರಿ, ಮುಖ್ಯ ನ್ಯಾಯಮೂರ್ತಿ