ವಾಯುಪಡೆಗೆ ತರಬೇತಿ ವಿಮಾನಗಳ ಕೊರತೆ(18 ವರ್ಷವಾದರೂ ‘ಸಿತಾರಾ’ ವಿಮಾನ ಪೂರೈಸದ ಎಚ್‌ಎಎಲ್‌ l ಒಪ್ಪಂದ ರದ್ದತಿಗೆ ರಕ್ಷಣಾ ಸಚಿವಾಲಯ ಚಿಂತನೆ)

0
421

ಭಾರತೀಯ ವಾಯುಪಡೆಯು ಎದುರಿಸುತ್ತಿರುವ 100ಕ್ಕೂ ಹೆಚ್ಚು ತರಬೇತಿ ವಿಮಾನಗಳ ಕೊರತೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.

ನವದೆಹಲಿ: ಭಾರತೀಯ ವಾಯುಪಡೆಯು ಎದುರಿಸುತ್ತಿರುವ 100ಕ್ಕೂ ಹೆಚ್ಚು ತರಬೇತಿ ವಿಮಾನಗಳ ಕೊರತೆ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.

ಅಗತ್ಯವಿದ್ದ ವಿಮಾನಗಳ ಪೂರೈಕೆಗೆ 1999ರಲ್ಲೇ ಎಚ್‌ಎಎಲ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಎಚ್‌ಎಎಲ್‌ ಈವರೆಗೆ ವಿಮಾನವನ್ನು ಪೂರೈಸಿಲ್ಲ. ಹೀಗಾಗಿ ಈ ಒಪ್ಪಂದವನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯವು ಸಂಸದೀಯ ಸಮಿತಿಗೆ ಮಾಹಿತಿ ನೀಡಿದೆ.

‘ಸಿತಾರ ಇಂಟರ್‌ಮೀಡಿಯೇಟ್ ಜೆಟ್ ಟ್ರೈನರ್‌’ ವಿಮಾನಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಕೇಂದ್ರ ಸರ್ಕಾರವು 1999ರಲ್ಲೇ ಅನುಮೋದನೆ ನೀಡಿತ್ತು. ಒಪ್ಪಂದದ ಪ್ರಕಾರ 12 ವಿಮಾನಗಳನ್ನು 2005ರಲ್ಲಿ ವಾಯುಪಡೆಗೆ ನೀಡಬೇಕಿತ್ತು. 73 ವಿಮಾನಗಳನ್ನು 2010ರಲ್ಲಿ ನೀಡಬೇಕಿತ್ತು. ಆದರೆ ಈವರೆಗೂ ವಿಮಾನದ ವಿನ್ಯಾಸವೇ ಅಂತಿಮವಾಗಿಲ್ಲ’ ಎಂದು ಸಚಿವಾಲಯವು ತಿಳಿಸಿದೆ.

ಎಚ್‌ಎಎಲ್‌ಗೆ ಸಾಮರ್ಥ್ಯ ಇಲ್ಲ:

‘ಎಚ್‌ಎಎಲ್‌ ಬಹಳ ವರ್ಷಗಳ ಹಿಂದೆಯೇ ಸಿತಾರಾ ವಿಮಾನವನ್ನು ಅಭಿವೃದ್ಧಿಪಡಿಸಿದೆ. ಆದರೆ ಆ ವಿಮಾನದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿದ್ದವು’ ಎಂದು ಸಚಿವಾಲಯವು ಹೇಳಿದೆ.

‘ಪರಿಣಿತ ಪೈಲಟ್‌ಗಳು ಮಾತ್ರ ಆ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲರು. ಆದರೆ, ತರಬೇತಿ ಪಡೆಯುತ್ತಿರುವ ಪೈಲಟ್‌ಗಳಿಂದ ಆ ಮಟ್ಟದ ಸಾಮರ್ಥ್ಯ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಆ ನ್ಯೂನತೆಗಳನ್ನು ಸರಿಪಡಿಸುವಂತೆ ತಜ್ಞರು ಎಚ್‌ಎಎಲ್‌ಗೆ ಸೂಚಿಸಿದ್ದರು. ಆದರೆ ಅದರಲ್ಲೂ ಎಚ್‌ಎಎಲ್‌ ವಿಫಲವಾಯಿತು’ ಎಂದು ಹೇಳಿದೆ.

‘ಖಾಸಗಿ ಸಂಸ್ಥೆಯೊಂದರ ನೆರವು ಪಡೆದು ನ್ಯೂನತೆ ಸರಿಪಡಿಸಲು ಸೂಚಿಸಲಾಗಿತ್ತು. ಹೀಗಿದ್ದೂ ಆ ಸಮಸ್ಯೆ ಬಗೆಹರಿದಿಲ್ಲ. ಅದನ್ನು ಸರಿಪಡಿಸುವ ಸಾಮರ್ಥ್ಯ ಎಚ್‌ಎಎಲ್‌ಗೆ ಇಲ್ಲ. ಹೀಗಾಗಿ ಪರ್ಯಾಯಗಳ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಈಗ ಬಳಕೆಯಲ್ಲಿರುವ ಕಿರಣ್ ತರಬೇತಿ ವಿಮಾನಗಳನ್ನೇ ಮತ್ತಷ್ಟು ವರ್ಷ ಬಳಸಬೇಕೇ ಅಥವಾ ವಿದೇಶಿ ವಿಮಾನಗಳನ್ನು ಖರೀದಿಸಬೇಕೇ ಎಂಬುದನ್ನು ನಿರ್ಧರಿಸಬೇಕಿದೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ವಿಮಾನ ಪೂರೈಕೆ ವಿಳಂಬವಾದ ಕಾರಣ ವಾಯುಪಡೆ ತರಬೇತಿ ಕಾರ್ಯಕ್ರಮ ಮುಂದೂಡಿದೆ. ಇದರಿಂದ ತರಬೇತಿ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ
                   – ರಕ್ಷಣಾ ಸಚಿವಾಲಯ