ವಸೂಲಾಗದ ಸಾಲದ ತ್ವರಿತ ವಿಲೇವಾರಿಗೆ ಬ್ಯಾಂಕ್‌ಗಳ ಒಪ್ಪಂದ

0
17

ಭಾರಿ ಸವಾಲಾಗಿ ಪರಿಣಮಿಸಿರುವ ಸುಸ್ತಿ ಸಾಲಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಂಬಂಧ ಸಾರ್ವಜನಿಕ ಹಾಗೂ ಖಾಸಗಿ ವಲಯದ 20ಕ್ಕೂ ಹೆಚ್ಚು ಬ್ಯಾಂಕ್‌ಗಳು ಸೋಮವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

ಮುಂಬಯಿ: ಭಾರಿ ಸವಾಲಾಗಿ ಪರಿಣಮಿಸಿರುವ ಸುಸ್ತಿ ಸಾಲಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಂಬಂಧ ಸಾರ್ವಜನಿಕ ಹಾಗೂ ಖಾಸಗಿ ವಲಯದ 20ಕ್ಕೂ ಹೆಚ್ಚು ಬ್ಯಾಂಕ್‌ಗಳು ಜುಲೈ 23 ರ ಸೋಮವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ. 

ವಾರಾಂತ್ಯದ ವೇಳೆಗೆ ಮತ್ತಷ್ಟು ಬ್ಯಾಂಕ್‌ಗಳು ಈ ಉಪಕ್ರಮದಲ್ಲಿ ಕೈ ಜೋಡಿಸುವ ನಿರೀಕ್ಷೆ ಇದೆ. ದೇಶದ ಬ್ಯಾಂಕಿಂಗ್‌ ವಲಯವನ್ನು ಕಾಡುತ್ತಿರುವ ವಸೂಲಾಗದ ಸಾಲದ ಬಿಕ್ಕಟ್ಟಿನ ಪರಿಹಾರಕ್ಕೆ ಇದು ಸಹಕಾರಿ ಎನ್ನಲಾಗುತ್ತಿದೆ. 

ಇದುವರೆಗೆ ಸುಸ್ತಿ ಸಾಲದ ಇತ್ಯರ್ಥಕ್ಕೆ ಬ್ಯಾಂಕ್‌ ಒಕ್ಕೂಟದಲ್ಲಿ ಒಮ್ಮತ ಮೂಡದ ಪರಿಣಾಮ, ಸಾಲ ಮರು ವಸೂಲಿಗೆ ಹಿನ್ನಡೆಯಾಗುತ್ತಿತ್ತು. 

ಈ ಒಪ್ಪಂದದ ಪ್ರಕಾರ, ಸಾಲದಾತ ಬ್ಯಾಂಕ್‌ಗಳ ಒಕ್ಕೂಟದ ನೇತೃತ್ವ ವಹಿಸಿರುವ ಬ್ಯಾಂಕ್‌, ಸುಸ್ತಿ ಸಾಲದ ಇತ್ಯರ್ಥಕ್ಕೆ ಸಂಬಂಧಿಸಿ ಸೂಕ್ತ ಪ್ರಸ್ತಾಪವನ್ನು ಮುಂದಿಡಬಹುದು ಹಾಗೂ ಅದಕ್ಕೆ ಒಕ್ಕೂಟದಲ್ಲಿ ಶೇ.66 ಮಂದಿಯ ಅನುಮೋದನೆ ಸಾಕಾಗುತ್ತದೆ. ಪ್ರಸ್ತಾಪವನ್ನು ಒಪ್ಪದ ಬ್ಯಾಂಕ್‌ಗಳು ತಮ್ಮ ಖಾತೆಯಲ್ಲಿರುವ ವಸೂಲಾಗದ ಸಾಲವನ್ನು ಬೇರೆ ಹಣಕಾಸು ಸಂಸ್ಥೆಗೆ ಅಥವಾ ಬ್ಯಾಂಕ್‌ಗೆ ಮಾರಾಟ ಮಾಡಬಹುದು. ಇಲ್ಲವೇ ಒಕ್ಕೂಟದ ಪ್ರಮುಖ ಬ್ಯಾಂಕ್‌ ಅದನ್ನು ಖರೀದಿಸಲೂ ಅವಕಾಶ ಇದೆ. 

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ನೇತೃತ್ವದಲ್ಲಿ ಈ ಒಪ್ಪಂದದ ವ್ಯವಸ್ಥೆಯಾಗಿದೆ. ಸಾರ್ವಜನಿಕ ವಲಯದ 16 ಬ್ಯಾಂಕ್‌ ಹಾಗೂ ಖಾಸಗಿ ವಲಯದ 16 ಬ್ಯಾಂಕ್‌ಗಳು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿವೆ. 

ಭಾರತದ ಬ್ಯಾಂಕಿಂಗ್‌ನಲ್ಲಿ 10 ಲಕ್ಷ ಕೋಟಿ ರೂ. ವಸೂಲಾಗದ ಸಾಲವಿದ್ದು, ಈ ಮೊತ್ತ ಇನ್ನೂ ಏರುತ್ತಿದೆ. 

ಒಪ್ಪಂದದ ಸ್ವರೂಪ ಹೇಗೆ? 

ಸಾಲ ಕೊಟ್ಟಿರುವ ಬ್ಯಾಂಕ್‌ಗಳ ಒಕ್ಕೂಟವು ತಮ್ಮ ಪ್ರತಿನಿಧಿಯಾಗಿ ಪ್ರಮುಖ ಬ್ಯಾಂಕ್‌ ಅನ್ನು ನೇಮಕ ಮಾಡುತ್ತವೆ. ಈ ಬ್ಯಾಂಕ್‌ ಒಪ್ಪಂದದ ಜಾರಿಯ ಜವಾಬ್ದಾರಿ ವಹಿಸುತ್ತದೆ. ಸುಸ್ತಿ ಸಾಲದ ಇತ್ಯರ್ಥದ ಯೋಜನೆ ರೂಪಿಸುತ್ತದೆ. ಸಾಲದಾತರ ಪೈಕಿ ಶೇ.66ರಷ್ಟು ಮಂದಿ ಒಪ್ಪಿದರೆ ಸಾಕಾಗುತ್ತದೆ. 

ಒಪ್ಪಂದದ ಪರ ಇಲ್ಲದ ಬ್ಯಾಂಕ್‌ಗಳು ತಮ್ಮ ಸುಸ್ತಿ ಸಾಲವನ್ನು ಒಕ್ಕೂಟಕ್ಕೇ ಮಾರಬಹುದು. ಅಥವಾ ಹೊರಗಿ ಬ್ಯಾಂಕೇತರ ಹಣಕಾಸು ಸಂಸ್ಥೆಗೂ ಮಾರಬಹುದು.