ಲೋಕಸಭೆ ಮಾಜಿ ಸ್ಪೀಕರ್ ಸೋಮನಾಥ್ ಚಟರ್ಜಿ ನಿಧನ

0
48

ಲೋಕಸಭೆಯ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಹೊಸದಿಲ್ಲಿ: ಲೋಕಸಭೆಯ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ ಆಗಸ್ಟ್ 13 ರ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. 

ತೀವ್ರ ಹೃದಯಾಘಾತದ ಬಳಿಕ ಬೆಳಗ್ಗೆ 8:10ರ ವೇಳೆಗೆ ಅವರು ಕೊನೆಯುಸಿರೆಳೆದರು. ಕಳೆದ ಮಂಗಳವಾರ ಮೊದಲ ಬಾರಿ ಹೃದಯಾಘಾತ ಸಂಭವಿಸಿದ ಬಳಿಕ ಅವರನ್ನು ಕೋಲ್ಕತದ ಬೆಲ್ಲೆ ವ್ಯೂ ಕ್ಲಿನಿಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿದ್ದರು. 

12 ಜನ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿತ್ತು ಎಂದು ಮೂಲಗಳು ತಿಳಿಸಿವೆ. 

ಕಳೆದ ತಿಂಗಳು ಚಟರ್ಜಿ ಅವರು ಮಿದುಳಿನ ರಕ್ತನಾಳ ಒಡೆದು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. 40 ದಿನಗಳ ಕಾಲ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಹಾಗಿದ್ದರೂ ಕಳೆದ ಮಂಗಳವಾರ ಅವರ ಆರೋಗ್ಯಸ್ಥಿತಿ ತೀವ್ರ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಮತ್ತೆ ಆಸ್ಪತ್ರೆಗೆ ಸೇರಿಸಲಾಗಿತ್ತು. 

ಹತ್ತು ಬಾರಿ ಲೋಕಸಭೆ  ಸಂಸದರಾಗಿ ಆಯ್ಕೆಯಾಗಿದ್ದ ಅವರು, ಸಿಪಿಎಂನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 1968ರಲ್ಲಿ ಅವರು ಸಿಪಿಎಂ ಸೇರಿದ್ದರು. 

1996ರಲ್ಲಿ ಶ್ರೇಷ್ಠ ಸಂಸದ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. 2004ರಿಂದ 2009ರ ವರೆಗೆ ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. 

ಕಟ್ಟಿದ ಪಕ್ಷದಿಂದಲೇ ಉಚ್ಚಾಟನೆಗೆ ಗುರಿಯಾದ ಮುತ್ಸದ್ದಿ:

ಭಾರತ-ಅಮೆರಿಕ ಪರಮಾಣು ಒಪ್ಪಂದದ ವಿಷಯದಲ್ಲಿ ಯುಪಿಎ ಸರಕಾರಕ್ಕೆ ಸಿಪಿಎಂ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಾಗ ಸ್ಪೀಕರ್‌ ಹುದ್ದೆ ತ್ಯಜಿಸಲು ಚಟರ್ಜಿ ನಿರಾಕರಿಸಿದ್ದರು. ಹೀಗಾಗಿ ಪಕ್ಷ ಅವರನ್ನು ಉಚ್ಚಾಟಿಸಿತ್ತು. 

ಚಟರ್ಜಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ನಿಧನದಿಂದ ಭಾರತದ ರಾಜಕೀಯ ರಂಗ ಹಿರಿಯ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಅವರು ಬಡವರು ಮತ್ತು ತುಳಿತಕ್ಕೊಳಗಾದವರ ಗಟ್ಟಿ ಧ್ವನಿಯಾಗಿದ್ದರು ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ಸ್ಮರಿಸಿಕೊಂಡಿದ್ದಾರೆ.