ಲೋಕಪಾಲ: ಫೆ.28ರೊಳಗೆ ಹೆಸರು ಸೂಚಿಸಲು ‘ಸುಪ್ರೀಂ’ ತಾಕೀತು

0
704

ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕಕ್ಕೆ ಫೆಬ್ರುವರಿ 28ರೊಳಗೆ ಹೆಸರುಗಳನ್ನು ಸೂಚಿಸಬೇಕು ಎಂದು ಶೋಧ ಸಮಿತಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ನವದೆಹಲಿ (ಪಿಟಿಐ): ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ನೇಮಕಕ್ಕೆ ಫೆಬ್ರುವರಿ 28ರೊಳಗೆ ಹೆಸರುಗಳನ್ನು ಸೂಚಿಸಬೇಕು ಎಂದು ಶೋಧ ಸಮಿತಿಗೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ಅವರು ಶೋಧ ಸಮಿತಿಯ ಅಧ್ಯಕ್ಷರಾಗಿದ್ದಾರೆ.

ಶೋಧ ಸಮಿತಿಯು ಈ ಹೊಣೆಗಾರಿಕೆಯನ್ನು ನಿರ್ವಹಿಸಲು ಬೇಕಾಗುವ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಒದಗಿಸುವಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. 

ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲದ ಕೊರತೆಯಿಂದಾಗಿ ಶೋಧ ಸಮಿತಿಯು ಕೆಲಸ ಮಾಡುವುದು ಸಾಧ್ಯವಾಗಿಲ್ಲ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು. ಮುಂದಿನ ವಿಚಾರಣೆಯನ್ನು ಮಾರ್ಚ್‌ 7ಕ್ಕೆ ನಿಗದಿ ಮಾಡಲಾಗಿದೆ.

ಲೋಕಪಾಲ ನೇಮಕಕ್ಕೆ ಸಂಬಂಧಿಸಿ ಈತನಕ ಏನೇನು ಕ್ರಮ ಕೈಗೊಳ್ಳಲಾಗಿವೆ ಎಂಬ ಪ್ರಮಾಣಪತ್ರ ಸಲ್ಲಿಸುವಂತೆ ಇದೇ 4ರಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿತ್ತು.

ಲೋಕಪಾಲ ನೇಮಕದ ಬಗೆಗಿನ ಅಸಡ್ಡೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು.

ಶೋಧ ಸಮಿತಿಯ ಸದಸ್ಯರ ಹೆಸರನ್ನು ಕೂಡ ಸರ್ಕಾರವು ತನ್ನ ವೆಬ್‌ಸೈಟ್‌ನಲ್ಲಿ ಹಾಕಿಲ್ಲ ಎಂದು ಲೋಕಪಾಲ ನೇಮಕ ವಿಳಂಬ ಕುರಿತು ದೂರು ಸಲ್ಲಿಸಿರುವ ಎನ್‌ಜಿಒ ‘ಕಾಮನ್‌ ಕಾಸ್‌’ ಪರ ವಕೀಲ ಪ್ರಶಾಂತ್‌ ಭೂಷಣ್‌ 
ವಾದಿಸಿದ್ದರು

ಶೋಧ ಸಮಿತಿ ರಚನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಮಾಣಪತ್ರ ‘ಸಂಪೂರ್ಣವಾಗಿ ಅತೃಪ್ತಿಕರ’ ಎಂದು ಕಳೆದ ಜುಲೈ 24ರಂದು ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ‘ಉತ್ತಮವಾದ’ ‍ ಪ್ರಮಾಣಪತ್ರ ಸಲ್ಲಿಸಲು ನಿರ್ದೇಶನ ನೀಡಿತ್ತು