ಲೇಖಕ ನಾಗೇಶ ಹೆಗಡೆಗೆ ‘ಬಿಗ್ ಲಿಟ್ಲ್ ಬುಕ್’ ಪ್ರಶಸ್ತಿ

0
348

ಟಾಟಾ ಟ್ರಸ್ಟ್‌ನ ಪರಾಗ್‌ ಇನಿಷಿಯೇಟಿವ್‌ ವತಿಯಿಂದ ಕೊಡಮಾಡುವ ‘ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ’ಗೆ ಈ ಬಾರಿ ಕನ್ನಡದ ಹಿರಿಯ ಲೇಖಕ ಹಾಗೂ ‘ಪ್ರಜಾವಾಣಿ’ ಅಂಕಣಕಾರ ನಾಗೇಶ ಹೆಗಡೆ ಭಾಜನರಾಗಿದ್ದಾರೆ.

ಬೆಂಗಳೂರು: ಟಾಟಾ ಟ್ರಸ್ಟ್‌ನ ಪರಾಗ್‌ ಇನಿಷಿಯೇಟಿವ್‌ ವತಿಯಿಂದ ಕೊಡಮಾಡುವ ‘ಬಿಗ್ ಲಿಟ್ಲ್ ಬುಕ್ ಪ್ರಶಸ್ತಿ’ಗೆ ಈ ಬಾರಿ ಕನ್ನಡದ ಹಿರಿಯ ಲೇಖಕ ಹಾಗೂ ‘ಪ್ರಜಾವಾಣಿ’ ಅಂಕಣಕಾರ ನಾಗೇಶ ಹೆಗಡೆ ಭಾಜನರಾಗಿದ್ದಾರೆ.

ಪ್ರತಿವರ್ಷ ಒಂದು ಭಾಷೆಯ ಶ್ರೇಷ್ಠ ಮಕ್ಕಳ ಸಾಹಿತಿಯನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಈ ವರ್ಷ ಕನ್ನಡ ಭಾಷೆಯ ಲೇಖಕರನ್ನು ಪ್ರಶಸ್ತಿಗೆ ಆಯ್ದುಕೊಳ್ಳಲಾಗಿತ್ತು. ಈ ಪುರಸ್ಕಾರವು  5 ಲಕ್ಷ ನಗದು ಹಾಗೂ  ಸ್ಮರಣಿಕೆಯನ್ನು ಒಳಗೊಂಡಿದೆ. ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಸಮೃದ್ಧ ಸಾಹಿತ್ಯ ಪರಂಪರೆ ಇರುವ ಕನ್ನಡ ಭಾಷೆಗೆ ಈ ವರ್ಷದ ಪ್ರಶಸ್ತಿ ಸಂದಿದ್ದು ಸಂತಸ ತಂದಿದೆ’ ಎಂದು ಪ್ರಶಸ್ತಿ ಪ್ರದಾನ ಮಾಡಿದ ಟಾಟಾ ಲಿಟ್ ಫೆಸ್ಟ್‌ನ ಸಂಯೋಜಕ ಹಾಗೂ ವಿಮರ್ಶಕ ಅನಿಲ್ ಧಾರ್ಕರ್ ಹೇಳಿದರು.

ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಮೊದಲ ಸುತ್ತಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಗುರುತಿಸಲಾಗಿತ್ತು. ಪುರಸ್ಕೃತರ ಹೆಸರನ್ನು ತಜ್ಞರ ಸಮಿತಿ ಅಂತಿಮಗೊಳಿಸಿತ್ತು. ಅಂತಿಮ ಸುತ್ತಿನಲ್ಲಿ ನಾ. ಡಿಸೋಜ, ತಿಪಟೂರಿನ ನಾಗರಾಜ ಶೆಟ್ಟಿ, ಕೋಲಾರದ ಸಿ.ಎಂ. ಗೋವಿಂದ ರೆಡ್ಡಿ ಮತ್ತು ನಾಗೇಶ ಹೆಗಡೆ ಅವರ ಹೆಸರುಗಳಿದ್ದವು.

ಹಿಂದಿನ ಎರಡು ವರ್ಷಗಳಲ್ಲಿ ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿನ ಮಕ್ಕಳ ಸಾಹಿತ್ಯವನ್ನು ಪ್ರಶಸ್ತಿಗೆ ಪರಿಗಣಿಸಲಾಗಿತ್ತು.