“ಲೂಕಾ ಮಾಡ್ರಿಕ್”ಗೆ 2018 ನೇ ಸಾಲಿನ ಫಿಫಾ ವರ್ಷದ ಆಟಗಾರ ಪ್ರಶಸ್ತಿ

0
624

ರಿಯಲ್ ಮ್ಯಾಡ್ರಿಡ್ ಹಾಗೂ ಕ್ರೊವೇಷಿಯಾದ ಸ್ಟಾರ್ ಮಿಡ್​ಫೀಲ್ಡರ್ ಲೂಕಾ ಮಾಡ್ರಿಕ್ 2018ರ ಫಿಫಾ ವರ್ಷದ ಆಟಗಾರ ಗೌರವ ಪಡೆದಿದ್ದಾರೆ.

ಲಂಡನ್: ರಿಯಲ್ ಮ್ಯಾಡ್ರಿಡ್ ಹಾಗೂ ಕ್ರೊವೇಷಿಯಾದ ಸ್ಟಾರ್ ಮಿಡ್​ಫೀಲ್ಡರ್ ಲೂಕಾ ಮಾಡ್ರಿಕ್ 2018ರ ಫಿಫಾ ವರ್ಷದ ಆಟಗಾರ ಗೌರವ ಪಡೆದಿದ್ದಾರೆ. ವರ್ಷದ ಆಟಗಾರ ಪ್ರಶಸ್ತಿ ರೇಸ್​ನಲ್ಲಿ ಪೋರ್ಚುಗಲ್ ಹಾಗೂ ಜುವೆಂಟಸ್ ಕ್ಲಬ್​ನ ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಈಜಿಪ್ಟ್​ನ ಮೊಹಮದ್ ಸಲಾಹ್​ರನ್ನು ಹಿಂದಿಕ್ಕಿದ ಮಾಡ್ರಿಕ್, ಸೆಪ್ಟೆಂಬರ್ 24 ರ ಸೋಮವಾರ ನಡೆದ ದಿ ಬೆಸ್ಟ್ ಫಿಫಾ ಫುಟ್​ಬಾಲ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಆ ಮೂಲಕ ದಶಕಗಳ ಕಾಲ ಈ ಪ್ರಶಸ್ತಿಯ ಮೇಲೆ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಶ್ಚಿಯಾನೊ ರೊನಾಲ್ಡೊ ಹೊಂದಿದ್ದ ಅಧಿಪತ್ಯವನ್ನು ಅಂತ್ಯಗೊಳಿಸಿದರು.

ರಷ್ಯಾದಲ್ಲಿ ನಡೆದ 2018ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನದ ಚೆಂಡಿನ ಗೌರವ ಪಡೆದಿದ್ದ ಮಾಡ್ರಿಕ್, ಆಗಸ್ಟ್​ನಲ್ಲಿ ಯುಇಎಫ್​ಎಯಿಂದ ವರ್ಷದ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಮೇ ತಿಂಗಳಲ್ಲಿ ರಿಯಲ್ ಮ್ಯಾಡ್ರಿಡ್ ಜತೆಗೂಡಿ ನಾಲ್ಕನೇ ಚಾಂಪಿಯನ್ಸ್ ಲೀಗ್ ಪ್ರಶಸ್ತಿ ಜಯಿಸಿದ್ದ ಮಾಡ್ರಿಕ್, ಆ ಬಳಿಕ ನಡೆದ ಫಿಫಾ ವಿಶ್ವಕಪ್ ಫುಟ್​ಬಾಲ್​ನಲ್ಲಿ ಕ್ರೊವೇಷಿಯಾ ತಂಡದ ರನ್ನರ್​ಅಪ್ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ‘ದಿ ಬೆಸ್ಟ್ ಮೆನ್ಸ್ ಪ್ಲೇಯರ್ ಆಫ್ ದ ಇಯರ್’ ಎನ್ನುವ ಹೆಸರಲ್ಲಿ ವರ್ಷದ ಆಟಗಾರನಿಗೆ ಫಿಫಾ ಪ್ರಶಸ್ತಿ ಪ್ರದಾನ ಮಾಡುತ್ತದೆ. 2008ರಿಂದಲೂ ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಲಿಯೋನೆಲ್ ಮೆಸ್ಸಿ ಹೊರತಾಗಿ ಉಳಿದವರು ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ, 2006ರ ಬಳಿಕ ಇದೇ ಮೊದಲ ಬಾರಿಗೆ ಲಿಯೋನೆಲ್ ಮೆಸ್ಸಿ, ಪ್ರಶಸ್ತಿಯ ಅಗ್ರ 3ರಲ್ಲಿ ಶಾರ್ಟ್​ಲಿಸ್ಟ್ ಆಗಲು ವಿಫಲವಾಗಿದ್ದರು. ಮೆಸ್ಸಿ ಮತ್ತು ರೊನಾಲ್ಡೊ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಜರಿರಲಿಲ್ಲ.

ಕಳೆದ ಋತುವಿನಲ್ಲಿ ಅದ್ಭುತ ನಿರ್ವಹಣೆ ತೋರಿದ್ದ ಮಾಡ್ರಿಕ್, 2017ರ ಕ್ಲಬ್ ವಿಶ್ವಕಪ್​ನಲ್ಲಿ ಚಿನ್ನದ ಚೆಂಡಿನ ಗೌರ ಪಡೆದುಕೊಂಡಿದ್ದರು. ಸತತ ಮೂರನೇ ವರ್ಷ ಚಾಂಪಿಯನ್ಸ್ ಲೀಗ್​ನ ವರ್ಷದ ಟೀಮ್ಲ್ಲಿ ಸ್ಥಾನ ಪಡೆದಿದ್ದ ಮಾಡ್ರಿಕ್, ಸತತ 2ನೇ ವರ್ಷ ಯುಇಎಫ್​ಎ ಟೂರ್ನಿಯ ಅತ್ಯುತ್ತಮ ಮಿಡ್​ಫೀಲ್ಡರ್ ಎನ್ನುವ ಶ್ರೇಯವನ್ನೂ ಪಡೆದಿದ್ದರು. -ಏಜೆನ್ಸೀಸ್