ಲಾಡೆನ್ ಪುತ್ರನ ಮದುವೆ 9/11ರ ವಿಮಾನ ಅಪಹರಣಕಾರನ ಪುತ್ರಿ ಜತೆಗೆ

0
23

ಹತ್ಯೆಗೀಡಾದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ ಪುತ್ರ ಹಮ್ಜಾ ಬಿನ್ ಲಾಡೆನ್‌ ವಿಮಾನ ಹೈಜಾಕರ್‌ ಮೊಹಮ್ಮದ್‌ ಅಟ್ಟಾನ ಪುತ್ರಿಯನ್ನು ಮದುವೆಯಾಗಿದ್ದಾನೆ.

ಲಂಡನ್‌: ಹತ್ಯೆಗೀಡಾದ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌  ಪುತ್ರ ಹಮ್ಜಾ ಬಿನ್ ಲಾಡೆನ್‌ ವಿಮಾನ ಹೈಜಾಕರ್‌ ಮೊಹಮ್ಮದ್‌ ಅಟ್ಟಾನ ಪುತ್ರಿಯನ್ನು ಮದುವೆಯಾಗಿದ್ದಾನೆ. 

ಈ ಮದುವೆ ನಡೆದಿರುವುದನ್ನು ಒಸಾಮಾ ಬಿನ್ ಲಾಡೆನ್‌ ಕುಟುಂಬದ ಅಹ್ಮದ್‌ ಮತ್ತು ಹಸನ್‌ ಅಲ್ ಅಟ್ಟಾಸ್‌ ಖಚಿತಪಡಿಸಿದ್ದಾರೆ. 

2001ರ ಸೆಪ್ಟೆಂಬರ್‌ನಲ್ಲಿ ಅಮೆರಿಕ ಮೇಲೆ ನಡೆದ ದಾಳಿಗೆ ವಿಮಾನ ಅಪಹರಣದ ಪ್ರಮುಖ ರೂವಾರಿಯೇ ಈ ಮೊಹಮ್ಮದ್‌ ಅಟ್ಟಾ. 

ಈಜಿಪ್ಟ್‌ ಪ್ರಜೆಯಾದ ಈತ ಅಮೆರಿಕನ್ ಏರ್‌ಲೈನ್ಸ್‌ ವಿಮಾನವನ್ನು ಅಪಹರಿಸಿ ವಿಶ್ವ ವಾಣಿಜ್ಯ ಕೇಂದ್ರದ ಉತ್ತರ ಗೋಪುರಕ್ಕೆ (ಟವರ್‌) ಡಿಕ್ಕಿ ಹೊಡೆಸಿದ್ದ. ಈ ದಾಳಿಯಲ್ಲಿ ವಿಮಾನದೊಳಗಿದ್ದ ಎಲ್ಲ 92 ಮಂದಿ ಪ್ರಯಾಣಿಕರು ಮತ್ತು ಕಟ್ಟಡದಲ್ಲಿದ್ದ 1,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 

ಇಂತಹ ಮೊಹಮ್ಮದ್‌ ಅಟ್ಟಾನ ಪುತ್ರಿಯನ್ನು ಲಾಡೆನ್‌ ಪುತ್ರ ಮದುವೆಯಾಗಿದ್ದಾನೆ. ಆತ ಎಲ್ಲಿದ್ದಾನೆ ಎಂಬುದು ಖಚಿತವಿಲ್ಲ; ಆದರೆ ಅಫ್ಘಾನಿಸ್ತಾನದಲ್ಲಿರುವ ಸಾಧ್ಯತೆಯೇ ಹೆಚ್ಚು’ ಎಂದು ಅಹ್ಮದ್‌ ಅಲ್ ಅಟ್ಟಾಸ್‌ ಗಾರ್ಡಿಯನ್ ಪತ್ರಿಕೆಗೆ ತಿಳಿಸಿದ್ದಾರೆ. 

ಹಮ್ಜಾ ಇತ್ತೀಚೆಗೆ ಅಲ್‌ ಕಾಯಿದಾ ಉಗ್ರ ಸಂಘಟನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾನೆ, ತನ್ನ ತಂದೆ ಲಾಡೆನ್‌ ಸಾವಿಗೆ ಸೇಡು ತೀರಿಸಿಕೊಳ್ಳುವ ಸಂಚು ರೂಪಿಸುತ್ತಿದ್ದಾನೆ ಎಂದು ಈ ಸೋದರರು ತಿಳಿಸಿದ್ದಾರೆ. 

2011ರ ಮೇ 2ರಂದು ಅಮೆರಿಕದ ಮಿಲಿಟರಿ ದಾಳಿಯಲ್ಲಿ ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ಅಡಗಿದ್ದ ಲಾಡೆನ್‌ ಹತನಾಗಿದ್ದ. ಲಾಡೆನ್‌ನ ಇನ್ನೊಬ್ಬ ಪುತ್ರ ಖಾಲಿದ್‌ ಕೂಡ ಆ ದಾಳಿಯಲ್ಲಿ ಹತನಾಗಿದ್ದ.