ಲಂಡನ್‌ನಲ್ಲಿ ನೀರವ್‌ ಮೋದಿ ಬಂಧನ

0
325

ಭಾರತದ ಬ್ಯಾಂಕುಗಳಿಗೆ ಬಹುಕೋಟಿ ವಂಚಿಸಿದ ಆರೋಪ ಹೊತ್ತ, ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಲಂಡನ್‌ (ಪಿಟಿಐ): ಭಾರತದ ಬ್ಯಾಂಕುಗಳಿಗೆ ಬಹುಕೋಟಿ ವಂಚಿಸಿದ ಆರೋಪ ಹೊತ್ತ, ಲಂಡನ್‌
ನಲ್ಲಿ ತಲೆಮರೆಸಿಕೊಂಡಿದ್ದ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿಯನ್ನು ಪೊಲೀಸರು ಮಾರ್ಚ್ 20 ರ ಬುಧವಾರ ಬಂಧಿಸಿದ್ದಾರೆ.

ನೀರವ್‌ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ಇಲ್ಲಿನ  ಕೋರ್ಟ್‌, ಅವರನ್ನು ಈ ತಿಂಗಳ 29ರವರೆಗೆ  ಪೊಲೀಸ್‌ ವಶಕ್ಕೆ ಒಪ್ಪಿಸಿದೆ. ಅವರನ್ನು ಭಾರತಕ್ಕೆ ಗಡಿಪಾರುಮಾಡುವ ಕುರಿತ ಅರ್ಜಿ ವಿಚಾರಣೆಯನ್ನು 29ಕ್ಕೆ ಮುಂದೂಡಿದೆ.

ಭಾರತದ ಜಾರಿ ನಿರ್ದೇಶನಾಲಯ (ಇ.ಡಿ) ಮಂಡಿಸಿದ್ದ ವಾದ ಮಾನ್ಯ ಮಾಡಿದ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌, ನೀರವ್‌ ಮೋದಿ ಬಂಧನಕ್ಕೆ ವಾರಂಟ್‌ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ, ಲಂಡನ್‌ನ ವೆಸ್ಟ್‌ಎಂಡ್‌ನಲ್ಲಿರುವ ಸೆಂಟರ್‌ ಪಾಯಿಂಟ್‌ನ ಐಷಾರಾಮಿ ಅಪಾರ್ಟ್‌ಮೆಂಟ್‌ ನಲ್ಲಿ ಮೋದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ  13,500 ಕೋಟಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ನೀರವ್‌ ಮೋದಿಯನ್ನು ಇಂಗ್ಲೆಂಡ್‌ನಿಂದ ಗಡಿಪಾರು ಮಾಡಬೇಕು ಎಂಬ ಭಾರತದ ಯತ್ನಕ್ಕೆ ಈ ಬೆಳವಣಿಗೆಯಿಂದ ಬಲ ಬಂದಂತಾಗಿದೆ. ನೀರವ್‌ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ಈ ಪ್ರಕರಣದ ಎರಡನೇ ಆರೋಪಿ.

ವಾಹನ, ಕಲಾಕೃತಿ ಹರಾಜು: ನೀರವ್‌ ಮೋದಿಗೆ ಸೇರಿದ 173 ಕಲಾಕೃತಿ ಹಾಗೂ ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಮುಂಬೈನ ವಿಶೇಷ ಕೋರ್ಟ್‌ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಅನುಮತಿ ನೀಡಿದೆ.