ಲಂಕಾ ಸರಣಿ ಸ್ಫೋಟದ ಹಿಂದೆ ಐಸಿಸ್ ಕೈವಾಡ

0
461

ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ಏಪ್ರೀಲ್ 21 ರ ಭಾನುವಾರ 320ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳಿಗೆ ತಾನೇ ಹೊಣೆ ಎಂದು ಇಸ್ಲಾಮಿಕ್ ಸ್ಟೇಟ್ (ಐಸಿಸ್‌) ಉಗ್ರ ಸಂಘಟನೆ ಹೇಳಿಕೊಂಡಿದೆ.

ಕೊಲಂಬೋ: ಶ್ರೀಲಂಕಾದಲ್ಲಿ ಈಸ್ಟರ್ ಹಬ್ಬದ ಭಾನುವಾರ 320ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳಿಗೆ ತಾನೇ ಹೊಣೆ ಎಂದು ಇಸ್ಲಾಮಿಕ್ ಸ್ಟೇಟ್ (ಐಸಿಸ್‌) ಉಗ್ರ ಸಂಘಟನೆ ಹೇಳಿಕೊಂಡಿದೆ. 

ಸರಣಿ ಸ್ಫೋಟಗಳು ಸಂಭವಿಸಿ 48 ಗಂಟೆಗಳ ಬಳಿಕ ಐಸಿಸ್‌ ಈ ಹೇಳಿಕೆ ನೀಡಿದೆ. ವಿದೇಶೀಯರೇ ಹೆಚ್ಚಾಗಿ ನೆಲೆಸಿದ್ದ ಮೂರು ಐಷಾರಾಮಿ ಹೋಟೆಲ್‌ಗಳು ಮತ್ತು ಮೂರು ಚರ್ಚ್‌ಗಳಲ್ಲಿ ಒಟ್ಟಾರೆ 8 ಸರಣಿ ಸ್ಫೋಟಗಳು ಸಂಭವಿಸಿದ್ದವು. 

ನ್ಯೂಜಿಲೆಂಡ್‌ನಲ್ಲಿ ಎರಡು ಮಸೀದಿಗಳಲ್ಲಿ 50ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಶೂಟೌಟ್ ಪ್ರಕರಣಕ್ಕೆ ಸೇಡು ತೀರಿಸಲು ಈ ದಾಳಿ ನಡೆದಿರುವುದಾಗಿ ತನಿಖಾಧಿಕಾರಿಗಳನ್ನು ಉಲ್ಲೇಖಿಸಿ ಶ್ರೀಲಂಕಾ ಸರಕಾರ ತಿಳಿಸಿದೆ. 

ಸ್ಥಳೀಯವಾಗಿ ನ್ಯಾಷನಲ್‌ ತೌಹೀತ್ ಜಮಾತ್ (ಎನ್‌ಟಿಜೆ) ಎಂಬ ಇಸ್ಲಾಮಿಕ್ ಉಗ್ರ ಸಂಘಟನೆ ಈ ಕೃತ್ಯ ನಡೆಸಿದೆ. ಆದರೆ ಇದರ ಹಿಂದೆ ವಿದೇಶೀ ಶಕ್ತಿಗಳ ಕೈವಾವಿದೆಯೆ ಎಂಬುದು ಪತ್ತೆಯಾಗಬೇಕಿದೆ ಎಂದು ಲಂಕಾ ಸರಕಾರ ಹೇಳಿತ್ತು. 

‘ಅಮೆರಿಕ ನೇತೃತ್ವದ ಮೈತ್ರಿಕೂಟದ ಸದಸ್ಯ ದೇಶಗಳ ಪ್ರಜೆಗಳು ಮತ್ತು ಶ್ರೀಲಂಕಾದ ಕ್ರೈಸ್ತರನ್ನು ಗುರಿಯಾಗಿಸಿ ಈ ದಾಳಿಗಳನ್ನು ನಡೆಸಲಾಗಿದೆ’ ಎಂದು ಐಸಿಸ್‌ ಉಗ್ರ ಸಂಘಟನೆಯ ಪ್ರಚಾರ ಸಂಸ್ಥೆ ಅಮಾಕ್ ಹೇಳಿದೆ. 

ಆದರೆ ತನ್ನ ಹೇಳಿಕೆಗೆ ಯಾವುದೇ ಸಾಕ್ಷ್ಯಾಧಾರಗಳು ಅಥವಾ ದಾಳಿಕೋರರ ವಿವರಗಳನ್ನು ಅದು ಒದಗಿಸಿಲ್ಲ. ಕೊಲಂಬೋದ ಶ್ರೀಮಂತ ಮುಸ್ಲಿಂ ಉದ್ಯಮಿಗೆ ಸೇರಿದ ಹೋಟೆಲ್‌ಗಳ ಮೇಲೆ ಈ ದಾಳಿ ನಡೆದಿದೆ ಎಂದು ಲಂಕಾ ಪೊಲೀಸರು ತಿಳಿಸಿದ್ದಾರೆ. 

ಶಾಂಗ್ರಿ-ಲಾ ಮತ್ತು ಸಿನಾಮೊನ್ ಸ್ಪೈಸ್ ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರಕ್ಕಾಗಿ ಅತಿಥಿಗಳು ಸಾಲುಗಟ್ಟಿ ನಿಂತಿದ್ದಾಗ ಇಬ್ಬರು ಯುವಕರು ತಾವು ಕಟ್ಟಿಕೊಂಡಿದ್ದ ಬಾಂಬ್‌ಗಳನ್ನು ಸ್ಫೋಟಿಸಿದರು. 

ಮತ್ತೊಂದು ಹೋಟೆಲ್ ಮೇಲೆ ನಡೆಸಲು ಯತ್ನಿಸಿದ 4ನೇ ದಾಳಿ ವಿಫಲವಾಗಿದೆ. ಸರಣಿ ಸ್ಫೋಟಕ್ಕೆ ಸಂಬಂಧಿಸಿದಂತೆ ಲಂಕಾ ಪೊಲೀಸರು ಇದುವರೆಗೆ 40 ಮಂದಿಯನ್ನು ಬಂಧಿಸಿದ್ದಾರೆ. ಮೃತರ ಗೌರವಾರ್ಥ ಇಂದು ಲಂಕಾದಲ್ಲಿ ರಾಷ್ಟ್ರೀಯ ಶೋಕಾಚರಣೆ ನಡೆಸಲಾಯಿತು.