ರೋಹನ್​ ಬೋಪಣ್ಣ ಹಾಗೂ ಸ್ಮೃತಿ ಮಂದಣ್ಣಗೆ 2018 ನೇ ಸಾಲಿನ ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಿದ ಕ್ರೀಡಾ ಸಚಿವ

0
74

ಟೆನಿಸ್​ ಆಟಗಾರ ರೋಹನ್​ ಬೋಪಣ್ಣ ಹಾಗೂ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದಣ್ಣ ಅವರಿಗೆ ಜುಲೈ 16 ರ ಮಂಗಳವಾರ ಕ್ರೀಡಾ ಸಚಿವ ಕಿರಣ್​ ರಿಜಿಜು ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ನವದೆಹಲಿ: ಟೆನಿಸ್​ ಆಟಗಾರ ರೋಹನ್​ ಬೋಪಣ್ಣ ಹಾಗೂ ಮಹಿಳಾ ಕ್ರಿಕೆಟರ್​ ಸ್ಮೃತಿ ಮಂದಣ್ಣ ಅವರಿಗೆ  ಜುಲೈ 16 ರ ಮಂಗಳವಾರ ಕ್ರೀಡಾ ಸಚಿವ ಕಿರಣ್​ ರಿಜಿಜು 2018 ನೇ ಸಾಲಿನ ಅರ್ಜುನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.ಇವರಿಬ್ಬರೂ ಕಳೆದ ವರ್ಷ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಸೆಪ್ಟೆಂಬರ್​ 25ರಂದು ನಡೆದ ಪ್ರಶಸ್ತಿ ಪುರಸ್ಕಾರ ಸಮಾರಂಭಕ್ಕೆ ಆಗಮಿಸಿರಲಿಲ್ಲ. ಆ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಕಾರಣ ದೇಶದಲ್ಲಿ ಇರಲಿಲ್ಲ.

ಏಷಿಯನ್​ ಗೇಮ್​ 2018ರಲ್ಲಿ ಪುರುಷರ ಡಬಲ್ಸ್​ನಲ್ಲಿ ಚಿನ್ನ ಗೆದ್ದಿದ್ದ ಬೋಪಣ್ಣ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ನಿನ್ನೆ ಪ್ರಶಸ್ತಿ ಸ್ವೀಕಾರ ಮಾಡಿ ಮಾತನಾಡಿದ ಅವರು, ನನಗೆ ಅರ್ಜುನ ಪ್ರಶಸ್ತಿ ಪಡೆದಿದ್ದು ಹೆಮ್ಮೆ ಎನ್ನಿಸುತ್ತಿದೆ. ತುಂಬ ಸಂತೋಷವಾಗಿದೆ. ಕ್ರೀಡಾ ಸಚಿವ ಕಿರಣ್​ ರಿಜಿಜು ಅವರು ದೇಶದ ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸ್ಥೆ ಹೊಂದಿದ್ದಾರೆ ಎಂದು ಹೇಳಿದರು.

ಸ್ಮೃತಿ ಮಂದಣ್ಣ ಅವರು 2018ರಲ್ಲಿ ಅತ್ಯುತ್ತಮ ಕ್ರೀಡಾ ಸಾಧನೆ ತೋರಿದ್ದರು. 12 ಏಕದಿನ ಪಂದ್ಯಗಳನ್ನಾಡಿ 669 ರನ್​ ಗಳಿಸಿದ್ದು. ಹಾಗೇ 25 ಟಿ-20 ಪಂದ್ಯಗಳಿಂದ 622 ರನ್​ ಗಳಿಸಿದ್ದರು. ಈ ಸಾಧನೆಯನ್ನು ಗಮನಿಸಿ ಅರ್ಜುನ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, 8-10 ತಿಂಗಳ ಹಿಂದೆ ನನಗೆ ಈ ಪ್ರಶಸ್ತಿ ಬಂದಿದ್ದು ಗೊತ್ತಾದಾಗ ತುಂಬ ಖುಷಿ ಆಯಿತು. ಅದನ್ನು ಇಂದು ಸ್ವೀಕರಿಸಿದ್ದು ಅದ್ಭುತ ಅನುಭವ ನೀಡಿದೆ. ಖಂಡಿತ ಇನ್ನು ಮುಂದೆ ಕೂಡ ಉತ್ತಮ ಪ್ರದರ್ಶನ ನೀಡುತ್ತೇನೆ. ಭಾರತಕ್ಕೆ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತೇನೆ ಎಂದು ತಿಳಿಸಿದರು.

ಪ್ರಶಸ್ತಿ ಪ್ರಧಾನ ಮಾಡಿದ ರಿಜಿಜು ಇಬ್ಬರು ಆಟಗಾರರನ್ನೂ ಶ್ಲಾಘಿಸಿದರು. ಬೋಪಣ್ಣ ಅವರು 2020ರಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್​ಗಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಪ್ರಶಸ್ತಿಯಿಂದ ಅವರ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸ್ಮೃತಿ ಮಂದಣ್ಣ ಜಗತ್ತಿನಲ್ಲೇ ಅತ್ಯುತ್ತಮ ಬ್ಯಾಟ್ಸ್ ವು​ಮೆನ್. ಅವರ ಆಟ ಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸುತ್ತೇನೆ ಎಂದಿದ್ದಾರೆ.