ರೋಗ ತಪಾಸಣಾ ವೆಚ್ಚಕ್ಕೆ ಕಡಿವಾಣ (ದೇಶದಾದ್ಯಂತ ಏಕರೂಪದ ಶುಲ್ಕ ನಿಗದಿಗೆ ಕರಡು ಪಟ್ಟಿ)

0
341

ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ರಕ್ತ ಮತ್ತು ರೋಗ ತಪಾಸಣಾ ಖಾಸಗಿ ಕೇಂದ್ರಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ನವದೆಹಲಿ: ರೋಗಿಗಳಿಂದ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವ ರಕ್ತ ಮತ್ತು ರೋಗ ತಪಾಸಣಾ ಖಾಸಗಿ ಕೇಂದ್ರಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

ಸುಮಾರು 160ಕ್ಕೂ ಹೆಚ್ಚು ರೋಗಗಳು ಮತ್ತು ರಕ್ತ ತಪಾಸಣೆಗೆ ಮಾದರಿ ಶುಲ್ಕವನ್ನು ನಿಗದಿಗೊಳಿಸಿರುವ ಕರಡು ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಪಟ್ಟಿಗೆ ಅನುಮೋದನೆ ದೊರೆತ ನಂತರ ದೇಶದಾದ್ಯಂತ ಖಾಸಗಿ ರಕ್ತ ತಪಾಸಣಾ ಪ್ರಯೋಗಾಲಯಗಳಲ್ಲಿ ಏಕರೂಪದ ಮಾದರಿ ಶುಲ್ಕ ಜಾರಿಗೆ ಬರಲಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಕಳೆದ ವಾರ ತಪಾಸಣಾ ಮಾದರಿ ದರಗಳ ಪಟ್ಟಿ ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಂದ ಅಹವಾಲು ಆಹ್ವಾನಿಸಿದೆ.

2019ರ ಜನವರಿ 31ರ ವರೆಗೆ ಈ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಗುವುದು. ನಂತರ ಐಸಿಎಂಆರ್‌ ಹಾಗೂ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಅಗತ್ಯ ಕ್ರಮ ತೆಗೆದುಕೊಂಡು ಪಟ್ಟಿ ಅಂತಿಮಗೊಳಿಸಲಿವೆ.

‘ಪಟ್ಟಿ ಜಾರಿಗೆ ಸರ್ಕಾರ ಬದ್ಧವಾಗಿದೆ. ತಪಾಸಣಾ ಶುಲ್ಕಗಳು ವಿವಿಧ ಕಡೆ ವಿಭಿನ್ನವಾಗಿವೆ.

ಈ ಪಟ್ಟಿ ಅನುಷ್ಠಾನಕ್ಕೆ ಬರುವುದರಿಂದ ರೋಗ ಮತ್ತು ರಕ್ತ ತಪಾಸಣೆ ಸೌಲಭ್ಯವು ಕೈಗೆಟುಕುವ ದರದಲ್ಲಿ ದೊರೆಯಲಿದೆ’ ಎಂದು ಐಸಿಎಂಆರ್‌ ಹಿರಿಯ ವಿಜ್ಞಾನಿ ಕಾಮಿನಿ ವಾಲಿಯಾ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ರೋಗ ತಪಾಸಣೆ ಮತ್ತು ಚಿಕಿತ್ಸೆಯ ಫಲಿತಾಂಶ ಸುಧಾರಿಸಲು ಅಗತ್ಯ ರೋಗ ಮತ್ತು ರಕ್ತ ತಪಾಸಣಾ ಪಟ್ಟಿ ಬಿಡುಗಡೆ ಮಾಡಿದ ಏಳು ತಿಂಗಳ ನಂತರ ಭಾರತ ತನ್ನ ಪಟ್ಟಿ ಬಿಡುಗಡೆ ಮಾಡಿದೆ.