ರೋಹಿಂಗ್ಯಾ ಮುಸ್ಲಿಮರಿಗೆ 250 ಮನೆ: ಮ್ಯಾನ್ಮಾರ್ ಆಡಳಿತಕ್ಕೆ ವಸತಿ ಹಸ್ತಾಂತರಿಸಿದ ಭಾರತದ ರಾಯಭಾರಿ ಸೌರಭ್

0
29

ಮ್ಯಾನ್ಮಾರನಲ್ಲಿ ಜನಾಂಗೀಯ ನಿಂದನೆ, ಹಿಂಸಾಚಾರದಿಂದಾಗಿ ಬಾಂಗ್ಲಾ ನಿರಾಶ್ರಿತರ ಶಿಬಿರಗಳಿಗೆ ಓಡಿಹೋಗಿದ್ದ ಸುಮಾರು 7 ಲಕ್ಷ ರೋಹಿಂಗ್ಯಾ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸಲು ಭಾರತವು 250 ಮನೆಗಳನ್ನು ನಿರ್ವಿುಸಿದೆ.

ನವದೆಹಲಿ: ಮ್ಯಾನ್ಮಾರನಲ್ಲಿ ಜನಾಂಗೀಯ ನಿಂದನೆ, ಹಿಂಸಾಚಾರದಿಂದಾಗಿ ಬಾಂಗ್ಲಾ ನಿರಾಶ್ರಿತರ ಶಿಬಿರಗಳಿಗೆ ಓಡಿಹೋಗಿದ್ದ ಸುಮಾರು 7 ಲಕ್ಷ ರೋಹಿಂಗ್ಯಾ ಮುಸ್ಲಿಮರಿಗೆ ಪುನರ್ವಸತಿ ಕಲ್ಪಿಸಲು ಭಾರತವು 250 ಮನೆಗಳನ್ನು ನಿರ್ವಿುಸಿದೆ.

ಮ್ಯಾನ್ಮಾರ್​ನಲ್ಲಿರುವ ಭಾರತದ ರಾಯಭಾರಿ ಸೌರಭ್ ಕುಮಾರ್ ಈ ಮನೆಗಳನ್ನು ಮ್ಯಾನ್ಮಾರ್ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ವಲಸೆ ಹೋಗಿರುವ ರೋಹಿಂಗ್ಯಾಗಳು ಮರಳಿದಾಗ ಅವರಿಗೆ ಈ ಮನೆಗಳನ್ನು ಹಸ್ತಾಂತರಿಸಲಾಗುತ್ತದೆ.

2017ರಲ್ಲಿ ಉಭಯ ದೇಶಗಳು ಮಾಡಿಕೊಂಡ ಒಪ್ಪಂದದನ್ವಯ -ಠಿ; 171 ಕೋಟಿ ಸಹಾಯ ಮಾಡುವುದಾಗಿ ಭಾರತ ಸಹಿ ಹಾಕಿತ್ತು. ಈ ನಿಟ್ಟಿನಲ್ಲಿ ತಲಾ 40 ಚ.ಮೀಟರ್ ವಿಸ್ತೀರ್ಣದ 250 ಮನೆಗಳನ್ನು ಶ್ವೆಜಾರ್, ಕೈನ್ ಚುಂಗ್ ಥಾಂಗ್ ಮತ್ತು ನಾನ್ ಥಾರಾ ಥುಂಗ್ ಪ್ರದೇಶಗಳಲ್ಲಿ ನಿರ್ವಿುಸಿದೆ. ಈ ಮನೆಗಳು ಭೂಕಂಪ, ಚಂಡಮಾರುತದಿಂದ ರಕ್ಷಿಸಲ್ಪಡುವ ಸುರಕ್ಷಿತಾ ವ್ಯವಸ್ಥೆ ಹೊಂದಿವೆ.

ಹೊಸದಾಗಿ ನಿರ್ವಿುಸಿರುವ ಮನೆಗಳ ಪ್ರದೇಶದಲ್ಲಿ ಈ ಹಿಂದೆ ವಾಸಗಿದ್ದ ರೋಹಿಂಗ್ಯಾ ಸಮುದಾಯದವರು ಮ್ಯಾನ್ಮಾರ್ ಗಡಿ ಭದ್ರತಾ ಪಡೆಯ ಯೋಧರನ್ನು ಕೊಂದಿದ್ದರು ಎಂದು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನೂರಾರು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಅತ್ಯಾಚಾರ ನಡೆಸಿ ಹತ್ಯೆಗೈಯಲಾಗಿತ್ತು. ಇದರಿಂದ ಭಯಗೊಂಡಿದ್ದ ರೋಹಿಂಗ್ಯಾಗಳು ವಲಸೆ ಹೋಗಿದ್ದು ಮರಳಿ ಈ ಮನೆಗಳಿಗೆ ಬರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಚಿಕ್ಕ ಗ್ರಾಮಗಳ ನಿರ್ಮಾಣ ಸೇರಿದಂತೆ 21 ಯೋಜನೆಗಳ ಪಟ್ಟಿಯನ್ನು ಮ್ಯಾನ್ಮಾರ್ ಭಾರತಕ್ಕೆ ನೀಡಿದ್ದು, ಒಪ್ಪಂದದನ್ವಯ ಇವುಗಳನ್ನು ಸಹ ಭಾರತ ನಿರ್ವಿುಸಿ ಕೊಡಬೇಕಿದೆ.

ರೋಹಿಂಗ್ಯಾ ಯಾರು?

ಮ್ಯಾನ್ಮಾರಿನ ರಖಿನೆ ಎಂಬಲ್ಲಿ ವಾಸಿಸುತ್ತಿ ರುವ ರೋಹಿಂಗ್ಯಾ ಭಾಷೆ ಮಾತನಾಡುವ ಮುಸ್ಲಿಂ ಸಮುದಾಯವನ್ನು ರೋಹಿಂಗ್ಯಾ ಮುಸ್ಲಿಮರು ಎನ್ನಲಾಗುತ್ತದೆ. ಏಷ್ಯಾದಾದ್ಯಂತ ಇವರ ಸಂಖ್ಯೆ ಸುಮಾರು 1.1 ಕೋಟಿ ಇದೆ. 1948ರಲ್ಲಿ ಮ್ಯಾನ್ಮಾರ್ ಸ್ವತಂತ್ರ್ಯವಾಗುತ್ತಿದ್ದಂತೆ ತನ್ನ ಪ್ರಜೆಗಳಿಗೆ ಪೌರತ್ವ ನೀಡಿದ ಸರ್ಕಾರ, ರೋಹಿಂಗ್ಯಾ ಮುಸ್ಲಿಮರನ್ನು ಪಟ್ಟಿಯಿಂದ ಹೊರಗಿಟ್ಟಿತು. ಅಲ್ಲಿನ ಬಹುಸಂಖ್ಯಾತ ಬೌದ್ಧರು ಇವರನ್ನು ತಮ್ಮವರೆಂದು ಒಪ್ಪಿಕೊಳ್ಳಲಿಲ್ಲ. ಇವರು ಭಾರತ ಮತ್ತು ಬಾಂಗ್ಲಾದಿಂದ ಇಲ್ಲಿಗೆ ವಲಸೆ ಬಂದಿದ್ದಾರೆ ಎಂಬುದು ಮ್ಯಾನ್ಮಾರ್​ನ ವಾದ. ಬಳಿಕ ಭಾರತ, ಬಾಂಗ್ಲಾ ಸೇರಿ ವಿವಿಧ ದೇಶಗಳಿಗೆ ಇವರು ವಲಸೆ ಹೋಗಿದ್ದಾರೆ.