ರೈಲ್ವೆ ಪ್ರಯಾಣ ಸುರಕ್ಷತೆ ಸಂದೇಶ ಸಾರಿದ ಬಾಲಿವುಡ್​ ಲೆಜೆಂಡ್​ ಅಮಿತಾಭ್​

0
524

ರೈಲ್ವೆ ಪ್ರಯಾಣ ಸುರಕ್ಷತೆಯ ಸಂದೇಶವನ್ನು ಸಾರಲು ಕೇಂದ್ರ ರೈಲ್ವೆ ವಿಭಾಗ ಬಾಲಿವುಡ್​ ಲೆಜೆಂಡ್​ ಅಮಿತಾಭ್​ ಬಚ್ಚನ್​ರನ್ನು ಆಯ್ಕೆ ಮಾಡಿದೆ.

ಮುಂಬೈ: ರೈಲ್ವೆ ಪ್ರಯಾಣ ಸುರಕ್ಷತೆಯ ಸಂದೇಶವನ್ನು ಸಾರಲು ಕೇಂದ್ರ ರೈಲ್ವೆ ವಿಭಾಗ ಬಾಲಿವುಡ್​ ಲೆಜೆಂಡ್​ ಅಮಿತಾಭ್​ ಬಚ್ಚನ್​ರನ್ನು ಆಯ್ಕೆ ಮಾಡಿದೆ.

ಈ ಸಂಬಂಧ ಕೇಂದ್ರ ರೈಲ್ವೆ ವಿಭಾಗ ಸಣ್ಣ ವಿಡಿಯೋ ಸಂದೇಶವನ್ನು ಅಕ್ಟೋಬರ್ 24 ರ ಬುಧವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಅಮಿತಾಭ್​ ಮನವಿ ಮಾಡಿದ್ದಾರೆ. ಅಲ್ಲದೆ, ರೈಲ್ವೆ ಹಳಿಗಳನ್ನು ದಾಟಬೇಡಿ ಬದಲಾಗಿ ಸೇತುವೆಯನ್ನು ಬಳಸಿ ಎಂದು ವಿನಂತಿಸಿಕೊಂಡಿದ್ದಾರೆ.

ಜೀವನದಲ್ಲಿ ನಿಮಗೆ ಯಾವುದೇ ಲೈಫ್​ಲೈನ್​ ಇರುವುದಿಲ್ಲ. ಒಮ್ಮೆ ಪ್ರಾಣ ಕಳೆದುಕೊಂಡರೆ ಮುಗಿಯಿತು ಎಂದು ವಿಡಿಯೋ ಸಂದೇಶದಲ್ಲಿ ಬಚ್ಚನ್​ ಎಚ್ಚರಿಕೆ ಗಂಟೆ ಬಾರಿಸಿದ್ದಾರೆ.

ಎರಡು ನಿಮಿಷ ಉದ್ದವಿರುವ ವಿಡಿಯೋವನ್ನು ಕೇಂದ್ರ ರೈಲ್ವೆ ಜನರಲ್​ ಮ್ಯಾನೆಜರ್​ ಡಿ.ಕೆ.ಶರ್ಮಾ ಹಾಗೂ ಇತರೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ಜನವರಿ, 2013 ರಿಂದ ಆಗಸ್ಟ್​ 2018ರ ನಡುವೆ ಮುಂಬೈ ವಲಯದಲ್ಲಿ ರೈಲು ಸಂಬಂಧದ ಅಪಘಾತಗಳಿಂದ 18,423 ಮಂದಿ ಜೀವ ಕಳೆದುಕೊಂಡಿದ್ದು, 18,847 ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಬಹಿರಂಗವಾಗಿದೆ.

ದಸರಾ ಹಬ್ಬದ ದಿನವೇ ಪಂಜಾಬ್​ನ ಅಮೃತಸರ ಭೀಕರ ರೈಲು ದುರಂತಕ್ಕೆ ಸಾಕ್ಷಿಯಾಗಿತ್ತು. ಕಳೆದ ಶುಕ್ರವಾರ ರಾತ್ರಿ ಜೋಡಿ ರೈಲು ಹಳಿ ಸಮೀಪದ ಮೈದಾನದಲ್ಲಿ ನಡೆಯುತ್ತಿದ್ದ ರಾವಣ ಪ್ರತಿಕೃತಿ ದಹನ ವೀಕ್ಷಿಸುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಮ 60 ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು. (ಏಜೆನ್ಸೀಸ್​)