ರೈಲು ನಿಲ್ದಾಣಗಳಲ್ಲೂ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ತಪಾಸಣೆ(ದೇಶದ 202 ರೈಲು ನಿಲ್ದಾಣ ಆಯ್ಕೆ)

0
462

ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 202 ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ.

ನವದೆಹಲಿ (ಪಿಟಿಐ): ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 202 ರೈಲು ನಿಲ್ದಾಣಗಳಲ್ಲಿ ವಿಮಾನ ನಿಲ್ದಾಣದ ಮಾದರಿಯ ಭದ್ರತಾ ವ್ಯವಸ್ಥೆ ಶೀಘ್ರ ಜಾರಿಗೆ ಬರಲಿದೆ.

ಪ್ರವೇಶ ದ್ವಾರದಲ್ಲಿ ವಿವಿಧ ಹಂತಗಳ ಭದ್ರತಾ ತಪಾಸಣೆಗೆ ಒಳಪಟ್ಟ ನಂತರವೇ ಪ್ರಯಾಣಿಕರಿಗೆ ರೈಲು ನಿಲ್ದಾಣದೊಳಗೆ ಪ್ರವೇಶ ದೊರೆಯಲಿದೆ.

ಅದಕ್ಕಾಗಿಯೇ ಇನ್ನು ಮುಂದೆ ಪ್ರಯಾಣಿಕರು ತಾವು ಪ್ರಯಾಣಿಸುವ ರೈಲು ಹೊರಡುವ ನಿಗದಿತ ಸಮಯಕ್ಕಿಂತ 15 ರಿಂದ 20 ನಿಮಿಷ ಮುಂಚಿತವಾಗಿ ರೈಲು ನಿಲ್ದಾಣಕ್ಕೆ ಬರಬೇಕಾಗುತ್ತದೆ.

ವಿಮಾನ ನಿಲ್ದಾಣಗಳಲ್ಲಿರುವಂತೆ ಪ್ರಯಾಣಿಕರು ಮೂರ‍್ನಾಲ್ಕು ತಾಸು ಮುಂಚಿತವಾಗಿ ಬರುವ ಅಗತ್ಯವಿಲ್ಲ  ಎಂದು ರೈಲ್ವೆ ಸುರಕ್ಷತಾ ಪಡೆಯ ಮಹಾನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

ಇದಕ್ಕಾಗಿ ದೇಶದ 202 ಪ್ರಮುಖ ರೈಲು ನಿಲ್ದಾಣಗಳನ್ನು ಗುರುತಿಸಲಾಗಿದ್ದು ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಭದ್ರತಾ ತಪಾಸಣಾ ವ್ಯವಸ್ಥೆ ಅಳವಡಿಸಲು ನೀಲನಕ್ಷೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿ ಮತ್ತು ಅಲಹಾಬಾದ್‌ ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದ್ದು, ಸದ್ಯದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು  ಕುಮಾರ್‌ ತಿಳಿಸಿದ್ದಾರೆ.

ಯೋಜನೆಯ ನೀಲನಕ್ಷೆ

ಸಮಗ್ರ ಭದ್ರತಾ ವ್ಯವಸ್ಥೆ (ಐಎಸ್‌ಎಸ್‌) ಅಡಿಯಲ್ಲಿ ರೈಲು ನಿಲ್ದಾಣಗಳಲ್ಲಿ ಬಹುಹಂತದ ಭದ್ರತಾ ತಪಾಸಣಾ ಯೋಜನೆ ಬಹುತೇಕ ಸಿದ್ಧಗೊಂಡಿದೆ.

l ವಿಮಾನ ನಿಲ್ದಾಣಗಳಂತೆ ರೈಲು ನಿಲ್ದಾಣಗಳಲ್ಲಿಯೂ ಬಿಗಿ ಭದ್ರತಾ ತಪಾಸಣಾ ವ್ಯವಸ್ಥೆ ಜಾರಿಗೆ ತರಲಾಗುವುದು

l ಅದಕ್ಕಾಗಿ ಎಷ್ಟು ಪ್ರವೇಶ ದ್ವಾರ ತೆರೆಯಬೇಕಾಗುತ್ತದೆ ಎಂಬುದನ್ನು ಗುರುತಿಸಲಾಗುತ್ತಿದೆ. ಪ್ರತಿ ಪ್ರವೇಶ ದ್ವಾರದಲ್ಲಿ ಭದ್ರತಾ ತಪಾಸಣೆ ನಡೆಸಲಾಗುವುದು 

l ಉಳಿದ ದ್ವಾರಗಳನ್ನು ಮುಚ್ಚಿ, ಸುತ್ತಲೂ ಆವರಣ ಗೋಡೆ ನಿರ್ಮಿಸಲಾಗುವುದು.

l ಆವರಣ ಗೋಡೆ ಇರದ ಕಡೆಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು

l ಇದರಿಂದ ಭದ್ರತಾ ವ್ಯವಸ್ಥೆ ಬಲಗೊಳ್ಳುವುದಲ್ಲದೆ, ಸಿಬ್ಬಂದಿ ಸಂಖ್ಯೆ ಕಡಿಮೆ ಆಗಲಿದೆ