ರೈತರ ಸಾಲಮನ್ನಾ ಮೊತ್ತ ತೀರಿಸಿ ಎಂದು ರಾಜ್ಯ ಸರ್ಕಾರಗಳಿಗೆ ನಬಾರ್ಡ್ ಸೂಚನೆ

0
1027

ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ.

ನವದೆಹಲಿ: ರೈತರ ಕೃಷಿ ಸಾಲಮನ್ನಾ ಮಾಡುತ್ತಿರುವ ರಾಜ್ಯ ಸರ್ಕಾರಗಳು ನಿಗದಿತ ಅವಧಿಯಲ್ಲಿ ಬ್ಯಾಂಕ್​ಗಳಿಗೆ ಹಣ ಭರಿಸಬೇಕು ಎಂದು ನಬಾರ್ಡ್ ಸೂಚಿಸಿದೆ.

ರಾಜ್ಯ ಸರ್ಕಾರಗಳು ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡದೆ ಸಾಲಮನ್ನಾ ಮಾಡುತ್ತಿವೆ ಎಂಬ ಆರೋಪದ ಮಧ್ಯೆಯೇ ನಬಾರ್ಡ್ ಈ ಮಾರ್ಗಸೂಚಿ ಹೊರಡಿಸಿದೆ. ಸಾಲಮನ್ನಾದಿಂದ ಬ್ಯಾಂಕ್​ಗಳ ಸಾಲಚಕ್ರ ಬದಲಾಗಬಾರದು. ಹೀಗಾಗಿ ರಾಜ್ಯ ಸರ್ಕಾರಗಳು ಘೋಷಿಸಿರುವ ಸಾಲಮನ್ನಾ ಮೊತ್ತಗಳನ್ನು ಕೂಡಲೇ ಬ್ಯಾಂಕ್​ಗಳಿಗೆ ವರ್ಗಾಯಿಸಬೇಕು ಎಂದು ವಿವರಿಸಲಾಗಿದೆ.

ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಸಾಲಮನ್ನಾ ಘೋಷಿಸಿದ ಬಳಿಕ ಬ್ಯಾಂಕ್​ಗಳಿಗೆ ಹಣ ವರ್ಗಾಯಿಸಿರಲಿಲ್ಲ. ಕಳೆದ 3-4 ವರ್ಷಗಳಿಂದ ಸಾವಿರಾರು ಕೋಟಿ ರೂ.ಗಳು ಬಾಕಿ ಉಳಿದಿವೆ. ಈ ಕುರಿತು ನಬಾರ್ಡ್ ಅಧಿಕಾರಿಗಳು ಸರ್ಕಾರಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬೆನ್ನಲ್ಲೇ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್​ಗಢ ಹಾಗೂ ಆಸ್ಸಾಂನಲ್ಲಿಯೂ ಸಾಲಮನ್ನಾ ಘೋಷಿಸಲಾಗಿದೆ. ಹೀಗಾಗಿ 2014ರಿಂದ ಸಾಲಮನ್ನಾ ಮಾಡಿರುವ ಎಲ್ಲ 12 ರಾಜ್ಯಗಳಿಗೆ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಕಳೆದ 2014ರಿಂದ ಸಾಲಮನ್ನಾ ಘೋಷಿಸಿರುವ 12 ರಾಜ್ಯಗಳಲ್ಲಿ ಕೇವಲ ಉತ್ತರಪ್ರದೇಶ ಸರ್ಕಾರ ಮಾತ್ರ ಬ್ಯಾಂಕ್​ಗಳಿಗೆ ಸಾಲಮನ್ನಾದ ಸಂಪೂರ್ಣ ಹಣ ವರ್ಗಾಯಿಸಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರಗಳು ಇದೇ ಮಾದರಿ ಮುಂದುವರಿಸಿದರೆ ಸ್ಥಳೀಯವಾಗಿ ಸಹಕಾರಿ ಬ್ಯಾಂಕ್​ಗಳು ಮುಚ್ಚುವ ಸ್ಥಿತಿಗೆ ಬರಲಿವೆ. ರೈತರಿಗೆ ಹೊಸ ಸಾಲ ಸಿಗುವಲ್ಲಿಯೂ ಸಮಸ್ಯೆಯಾಗಲಿದೆ. ಇದರಿಂದ ರೈತ ಸಮುದಾಯವೇ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರಗಳು ಎಚ್ಚರಿಕೆ ವಹಿಸಬೇಕು ಎಂದು ನಬಾರ್ಡ್ ಅಧಿಕಾರಿಗಳು ಎಚ್ಚರಿಸಿದ್ದಾರೆ.