ರೆಪೋ ದರ ಇಳಿಸಿದ “ಆರ್‌ಬಿಐ” : ಗೃಹ ಸಾಲದ ಬಡ್ಡಿ ದರ ಇಳಿಕೆ ಸಾಧ್ಯತೆ

0
511

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ( ಏಪ್ರಿಲ್ 4,2019)ರಂದು ರೆಪೋದರದಲ್ಲಿ .25 ಮೂಲಾಂಕದಷ್ಟು ಕಡಿತ ಮಾಡಿದೆ. ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.25 ರಿಂದ ಶೇ. 6.00ಕ್ಕೆ ಇಳಿಕೆಯಾಗಿದ್ದು, ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ.

ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ ( ಏಪ್ರಿಲ್ 4,2019)ರಂದು ರೆಪೋದರದಲ್ಲಿ 0.25 ಮೂಲಾಂಕದಷ್ಟು ಕಡಿತ ಮಾಡಿದೆ. ಇದರಿಂದ ರೆಪೋ ದರ ಈ ಮೊದಲಿದ್ದ ಶೇ. 6.25 ರಿಂದ ಶೇ. 6.00ಕ್ಕೆ ಇಳಿಕೆಯಾಗಿದ್ದು, ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ. 

ಪ್ರಸಕ್ತ ಹಣಕಾಸು ವರ್ಷದಲ್ಲಿ ರಿಸರ್ವ್‌ ಬ್ಯಾಂಕ್‌ನ(ಆರ್‌ಬಿಐ) ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಮೊದಲ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್‌ ನೇತೃತ್ವದಲ್ಲಿ ನಡೆದ ಆರ್‌ಬಿಐ ಸಭೆಯಲ್ಲಿ ರೆಪೋದರ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್‌ಬಿಐ ಬಡ್ಡಿ ದರವನ್ನು(ರೆಪೊ ದರ) ಶೇ.0.25ರಷ್ಟು ಇಳಿಕೆ ಮಾಡಿತ್ತು. ಈ ಪರಿಣಾಮ ರೆಪೊ ದರ ಶೇ.6.50ರಿಂದ ಶೇ.6.25ಕ್ಕೆ ಇಳಿಕೆಯಾಗಿತ್ತು. ಈಗ ಮತ್ತೆ ರೆಪೊ ದರ ಶೇ.0.25 ಕಡಿತವಾಗಿದ್ದು, ಶೇ.6ಕ್ಕೆ ತಲುಪಿದೆ. ಇದು ಮಾರುಕಟ್ಟೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. 

ಆರ್ಥಿಕ ಪರಾಮರ್ಶೆಗೆ ಸಂಬಂಧಿಸಿದ ಸಭೆ ಮಂಗಳವಾರ (ಏಪ್ರಿಲ್‌ 2,2019)ರಂದು ಆರಂಭವಾಗಿದ್ದು, 3 ದಿನಗಳ ಸಭೆ ಇಂದು ( ಏಪ್ರಿಲ್ 4,2019) ರೆಪೋದರ ಕಡಿತ ಘೋಷಣೆಯೊಂದಿಗೆ ಹೊರಬಿದ್ದಿದೆ. ಅಲ್ಲದೆ, ಲೋಕಸಭೆ ಚುನಾವಣೆ ಆರಂಭಕ್ಕೆ ಒಂದು ವಾರ ಮುನ್ನ ಈ ಘೋಷಣೆಯಾಗಿರುವುದು ಮಹತ್ವ ಎನಿಸಿಕೊಂಡಿದೆ. ಇದರಿಂದ ಗೃಹ ಸಾಲದ ಇಎಂಐ ಮತ್ತು ಇತರ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯಾಗುವ ಸಾಧ್ಯತೆಯಿದೆ. 

2016ರಲ್ಲಿ ಹಣಕಾಸು ನೀತಿ ಸಮಿತಿ ರಚನೆಯಾದ ಬಳಿಕ ಸತತ ಎರಡನೇ ಬಾರಿಗೆ ( ಫೆಬ್ರವರಿ ಹಾಗೂ ಏಪ್ರಿಲ್‌) ರೆಪೋ ದರದಲ್ಲಿ ಕಡಿತ ಮಾಡಿರುವುದು ಮೊದಲನೇ ಬಾರಿ. 

ಕಳೆದ 6 ತಿಂಗಳಲ್ಲಿ ಹಣದುಬ್ಬರವು ಕಡಿಮೆಯಿದ್ದು, ಆರ್‌ಬಿಐನ ಗುರಿಯಾದ ಶೇ.4ರೊಳಗೇ ಇದೆ. ಮುಂದಿನ 6 ತಿಂಗಳು ಸಹ ಹಣದುಬ್ಬರವು ನಿರೀಕ್ಷಿತ ಇಳಿಕೆಯ ಮಟ್ಟದಲ್ಲಿಯೇ ಸಾಗಲಿದೆ ಎಂದು ಅಂದಾಜು ಮಾಡಲಾಗಿದೆ. ”ಆರ್ಥಿಕ ಬೆಳವಣಿಗೆಗೆ ತ್ವರಿತವೇಗ ನೀಡುವ ನಿಟ್ಟಿನಲ್ಲಿ ರೆಪೊ ದರವನ್ನು ಆರ್‌ಬಿಐ ಮತ್ತೆ ಇಳಿಕೆ ಮಾಡಲಿದೆ,” ಎಂದು ಕೇರ್‌ ರೇಟಿಂಗ್‌ ಇತ್ತೀಚಿನ ವರದಿಯಲ್ಲಿ ಹೇಳಿತ್ತು. 

”ಜಾಗತಿಕ ಮತ್ತು ಸ್ಥಳೀಯ ಅಂಶಗಳು ದೇಶದ ಆರ್ಥಿಕತೆಯನ್ನು ನಿರ್ದೇಶಿಸುತ್ತವೆ. ಸರಕು ಸೇವೆಗಳ ಬಳಕೆ ಪ್ರಮಾಣ ಮಂದಗತಿಯಲ್ಲಿದೆ. ಹೂಡಿಕೆ ವೃತ್ತವೂ ನಿಧಾನಗತಿಯಲ್ಲಿದೆ. ಹೀಗಾಗಿ ಬಡ್ಡಿ ದರ ಇಳಿಕೆ ಮೂಲಕ ಆರ್ಥಿಕತೆ ಉತ್ತೇಜಿಸುವ ಅಗತ್ಯವಿದೆ. ಚುನಾವಣೋತ್ತರ ಬಜೆಟ್‌, ಮುಂಗಾರು ಮಳೆ ಮತ್ತು ಇಂಧನ ದರ ಮತ್ತಿತರ ಅಂಶಗಳ ಮೇಲೆಯೂ ಆರ್‌ಬಿಐ ಕಣ್ಣಿಟ್ಟಿದೆ,” ಎಂದು ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಕನ್ಸೂಮರ್‌ ಬ್ಯಾಂಕಿಂಗ್‌ ಅಧ್ಯಕ್ಷರಾದ ಶಾಂತಿ ಏಕಾಂಬರಂ ಅಭಿಪ್ರಾಯಪಟ್ಟಿದ್ದರು. 

ಇನ್ನು, ಜೂನ್ 3 – 6 ರ ನಡುವೆ ಮುಂದಿನ ಹಣಕಾಸು ನೀತಿ ಸಮಿತಿ ಸಭೆ ನಡೆಯಲಿದೆ.