ರಾಷ್ಟ್ರೀಯ ತನಿಖಾ ಸಂಸ್ಥೆಯ ಬಲ ಹೆಚ್ಚಿಸುವ ಮಸೂದೆಗೆ ಲೋಕಸಭೆ ಒಪ್ಪಿಗೆ l ಭಯೋತ್ಪಾದನೆ ನಿರ್ಮೂಲನೆ ಗುರಿ

0
19

ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ಇನ್ನಷ್ಟು ಬಲಪಡಿಸುವ ಮಸೂದೆಯನ್ನು ಲೋಕಸಭೆಯು ಸೋಮವಾರ ಅಂಗೀಕರಿಸಿದೆ.ಸೈಬರ್‌ ಅಪರಾಧ ಮತ್ತು ಮಾನವ ಕಳ್ಳ ಸಾಗಾಟದ ಪ್ರಕರಣಗಳ ತನಿಖೆ ನಡೆಸುವ ಅಧಿಕಾರವನ್ನು ಈ ಮಸೂದೆಯು ನೀಡುತ್ತದೆ.

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು (ಎನ್‌ಐಎ) ಇನ್ನಷ್ಟು ಬಲಪಡಿಸುವ ಮಸೂದೆಯನ್ನು ಲೋಕಸಭೆಯು  ಜುಲೈ 15 ರ ಸೋಮವಾರ ಅಂಗೀಕರಿಸಿದೆ. ಸೈಬರ್‌ ಅಪರಾಧ ಮತ್ತು ಮಾನವ ಕಳ್ಳ ಸಾಗಾಟದ ಪ್ರಕರಣಗಳ ತನಿಖೆ ನಡೆಸುವ ಅಧಿಕಾರವನ್ನು ಈ ಮಸೂದೆಯು ನೀಡುತ್ತದೆ. ಕಾಯ್ದೆಯ ದುರ್ಬಳಕೆ ಆಗದಂತೆ ನೋಡಿಕೊಳ್ಳಲಾಗುವುದು ಮತ್ತು ಧರ್ಮದ ಆಧಾರದಲ್ಲಿ ಯಾರನ್ನೂ ಗುರಿಯಾಗಿಸಲು ಅವಕಾಶ ಕೊಡುವುದಿಲ್ಲ ಎಂದು ಗೃಹ ಸಚಿವ ಅಮಿತ್‌ ಶಾ ಅವರು ಮಸೂದೆ ಅಂಗೀಕಾರಕ್ಕೂ ಮೊದಲು ಭರವಸೆ ಕೊಟ್ಟರು. 

‘ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ.  ಭಯೋತ್ಪಾದನೆಯ ನಿರ್ಮೂಲನೆಯೇ ನಮ್ಮ ಏಕೈಕ ಗುರಿ. ಕ್ರಮ ಕೈಗೊಳ್ಳುವಾಗ ಆರೋಪಿಯ ಧರ್ಮ ಯಾವುದು ಎಂದು ನೋಡುವುದೇ ಇಲ್ಲ’ ಎಂದು ಶಾ ಹೇಳಿದರು.

ವಿದೇಶದಲ್ಲಿ ಭಾರತೀಯರ ಮೇಲೆ ನಡೆಯುವ ಅಪರಾಧಗಳು ಮತ್ತು ಭಾರತದ ಹಿತಾಸಕ್ತಿಯ ಪ್ರಕರಣಗಳ ತನಿಖೆಯನ್ನು ಎನ್‌ಐಎ ನಡೆಸುವುದಕ್ಕೂ ಈ ಮಸೂದೆ ಅವಕಾಶ ಕೊಡುತ್ತದೆ. ಆದರೆ, ಈ ಅಂಶವು ಅಂತರರಾಷ್ಟ್ರೀಯ ಒಪ್ಪಂದ ಮತ್ತು ದೇಶೀಯ ಕಾನೂನುಗಳಿಗೆ ಬದ್ಧವಾಗಿರುತ್ತದೆ.

ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಸಂಸ್ಥೆಗೆ ಅಪರಿಮಿತ ಅಧಿಕಾರ ನೀಡುವುದು ಅಪೇಕ್ಷಣೀಯ ಅಲ್ಲ ಎಂದು ಎನ್‌ಐಎ ತಿದ್ದುಪಡಿ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಮನೀಶ್‌ ತಿವಾರಿ ಆಕ್ಷೇಪ ವ್ಯಕ್ತಪಡಿಸಿದರು. 

ಅದಕ್ಕೂ ಮೊದಲು ಮಾತನಾಡಿದ ಆರ್‌ಎಸ್‌ಪಿಯ ಎನ್‌.ಕೆ. ಪ್ರೇಮಚಂದ್ರನ್‌ ಮತ್ತು ಟಿಎಂಸಿಯ ಸೌಗತಾ ರಾಯ್‌ ಅವರು, ಬಜೆಟ್‌ ಚರ್ಚೆಯ ಸಂದರ್ಭದಲ್ಲಿ ಈ ಮಸೂದೆಯನ್ನು ಕೈಗೆತ್ತಿಕೊಳ್ಳುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು. ಆದರೆ, ಸ್ಪೀಕರ್‌ ಓಂ ಬಿರ್ಲಾ ಅವರು ಮಸೂದೆಯ ಚರ್ಚೆಗೆ ಅವಕಾಶ ಕೊಟ್ಟರು.
 
ಭಾರತದ ಹಿತಾಸಕ್ತಿಯ ವಿರುದ್ಧ ಪಾಕಿಸ್ತಾನ ನಡೆಸುವ ಕೃತ್ಯಗಳ ಬಗ್ಗೆ ಎನ್‌ಐಎ ತನಿಖೆ ನಡೆಸುವುದು ಸಾಧ್ಯವೇ ಎಂದು ಟಿಎಂಸಿಯ ಕಲ್ಯಾಣ್‌ ಬ್ಯಾನರ್ಜಿ ಪ್ರಶ್ನಿಸಿದರು. ‘ಪಾಕಿಸ್ತಾನದ ನೆಲದಿಂದ ಆಗುವ ಭಯೋತ್ಪಾದನೆಯನ್ನು ತಡೆಯಲು ಸಾಕಷ್ಟು ದಾರಿಗಳಿವೆ. ನಾವು ಅವರ ವಿರುದ್ಧ ನಿರ್ದಿಷ್ಟ ದಾಳಿ ಮತ್ತು ವಾಯುದಾಳಿ ನಡೆಸಿದ್ದೇವೆ’ ಎಂದು ಶಾ ಉತ್ತರಿಸಿದರು. 
 
2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿಯ ಬಳಿಕ ಆಗಿನ ಯುಪಿಎ ಸರ್ಕಾರ 2009ರಲ್ಲಿ ಎನ್‌ಐಎಯನ್ನು ಸ್ಥಾಪಿಸಿತ್ತು. ರಾಜ್ಯಗಳ ಅನುಮತಿ ಪಡೆಯದೆಯೇ ಭಯೋತ್ಪಾದಕ ಕೃತ್ಯಗಳ ತನಿಖೆ ನಡೆಸಲು ಎನ್‌ಐಎಗೆ ಅಧಿಕಾರ ಇದೆ.