ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಸಂಗ್ರಹಕ್ಕೆ “ಫಾಸ್ಟ್ಯಾಗ್” ಇನ್ನು ಕಡ್ಡಾಯ

0
53

ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಸಂಗ್ರಹಕ್ಕೆ ಡಿ.1ರಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಸಂಗ್ರಹಕ್ಕೆ ಡಿಸೆಂಬರ್.1ರಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ದೇಶದ 457ಕ್ಕೂ ಅಧಿಕ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಇರದ ವಾಹನ ಸಂಚರಿಸಿದರೆ ದುಪ್ಪಟ್ಟು ಶುಲ್ಕ ನೀಡಬೇಕಾಗುತ್ತದೆ. ಆದರೆ ಸದ್ಯಕ್ಕೆ ‘ಹೈಬ್ರೀಡ್ ಲೇನ್’ ಮೂಲಕ ವಿನಾಯಿತಿ ನೀಡಲು ಪ್ರಾಧಿಕಾರ ನಿರ್ಧರಿಸಿದೆ. ಇದರಿಂದ ಒಂದು ಹೈಬ್ರೀಡ್ ಲೇನ್ ಹೊರತುಪಡಿಸಿ ಟೋಲ್​ಪ್ಲಾಜಾದ ಉಳಿದೆಲ್ಲ ಲೇನ್​ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ.

ಫಾಸ್ಟ್ಯಾಗ್ ಇಲ್ಲದೇ ಈ ಲೇನ್​ಗಳಿಗೆ ಪ್ರವೇಶ ನೀಡಿದರೆ ದುಪ್ಪಟ್ಟು ಶುಲ್ಕ ನೀಡಿ ಸಂಚರಿಸಬೇಕಾಗುತ್ತದೆ. ಡಿಜಿಟಲ್ ಪಾವತಿ, ಪಾರದರ್ಶಕ ವ್ಯವಸ್ಥೆಯ ಜತೆಗೆ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್ಯಾಗ್ ಕಡ್ಡಾಯಗೊಳಿಸುತ್ತಿದೆ. ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಸರತಿಯಲ್ಲಿ ಕಾಯುವುದನ್ನು ಈ ಮೂಲಕ ತಪ್ಪಿಸುವ ಗುರಿಯನ್ನು ಪ್ರಾಧಿಕಾರ ಹಾಕಿಕೊಂಡಿದೆ. ಡಿ.1ರೊಳಗೆ ದೇಶದ ಎಲ್ಲ 457 ಟೋಲ್ ಪ್ಲಾಜಾಗಳು ಫಾಸ್ಟ್ಯಾಗ್ ರೀಡರ್ ಯಂತ್ರಗಳನ್ನು ಅಳವಡಿಸಿಕೊಳ್ಳಲೇಬೇಕು. ಇದರಿಂದ ಯಾರಿಗೂ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಎಚ್ಚರಿಸಿದೆ.

ಫಾಸ್ಟ್ಯಾಗ್ ಪ್ರಚಾರ ಹಾಗೂ ನೋಂದಣಿಗೆ ವಿಶೇಷ ಅಭಿಯಾನ ನಡೆಸಲು ಕೇಂದ್ರ ನಿರ್ಧರಿಸಿದೆ. ಸದ್ಯಕ್ಕೆ ಭಾರತದಲ್ಲಿ 53.6 ಲಕ್ಷ ಫಾಸ್ಟ್ಯಾಗ್​ಗಳಿವೆ. 2017ರ ಡಿಸೆಂಬರ್.1ರ ನಂತರ ಖರೀದಿಸಿರುವ ಎಲ್ಲ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಿದೆ. ಅದಕ್ಕೂ ಮುಂಚೆ ಖರೀದಿಸಿರುವ ವಾಹನ ಮಾಲೀಕರು ಅಥವಾ ನಂತರದ ದಿನಗಳಲ್ಲಿ ಫಾಸ್ಟ್ಯಾಗ್ ನೋಂದಣಿ ಮಾಡಿಯೂ ಬಳಸದ ವಾಹನ ಮಾಲೀಕರು ದುಪ್ಪಟ್ಟು ಶುಲ್ಕ ನೀಡುವುದು ಅನಿವಾರ್ಯವಾಗಲಿದೆ.

ಸಂಚಾರಸ್ನೇಹಿ ವ್ಯವಸ್ಥೆ

# ನಗದು ರೂಪದಲ್ಲಿ ಟೋಲ್ ನೀಡುವಾಗ ಕಳೆಯುವ ಸಮಯ ಉಳಿತಾಯ.

# ಬಹುತೇಕ ಟೋಲ್ ಪ್ಲಾಜಾಗಳಲ್ಲಿ ಚಿಲ್ಲರೆ ಬದಲು ಚಾಕಲೇಟ್ ನೀಡಿ ನಷ್ಟ ಮಾಡುತ್ತಾರೆ. ಡಿಜಿಟಲ್ ಪಾವತಿಯಿಂದ ಈ ಚಿಲ್ಲರೆ ಉಳಿತಾಯ.

# ಕ್ಯಾಷ್​ಬ್ಯಾಕ್​ನಿಂದ ಹಣ ಉಳಿತಾಯ.

# ಎಲ್ಲರೂ ಡಿಜಿಟಲ್ ಪಾವತಿಗೆ ಮುಂದಾದರೆ ಟೋಲ್​ನಲ್ಲಿ ನಿಮಿಷಗಟ್ಟಲೇ ನಿಲ್ಲುವುದು ತಪ್ಪಲಿದ್ದು, ಹೆದ್ದಾರಿ ಸಂಚಾರ ಸುಗಮವಾಗಲಿದೆ.

# ಟೋಲ್ ಪ್ಲಾಜಾದಲ್ಲಿನ ಅನಗತ್ಯ ಚಿಲ್ಲರೆ, ವಿಳಂಬದ ಕಿರಿಕಿರಿ ತಪ್ಪಲಿವೆ.

# ಟೋಲ್ ಸಂಗ್ರಹದಲ್ಲಿನ ಅಕ್ರಮಕ್ಕೂ ಕಡಿವಾಣ.

ಹೈಬ್ರೀಡ್ ಲೇನ್

ಸದ್ಯಕ್ಕೆ ಟೋಲ್ ಪ್ಲಾಜಾಗಳಲ್ಲಿ ಒಂದು ಲೇನ್ ಮಾತ್ರ ಫಾಸ್ಟ್ಯಾಗ್ ಸೀಮಿತವಾಗಿದೆ. ಆದರೆ ಡಿ.1ರಿಂದ ಒಂದು ಲೇನ್​ನಲ್ಲಿ ಮಾತ್ರ ನಗದು ಟೋಲ್ ಪಡೆಯುವ ಅವಕಾಶವಿರಲಿದೆ. ಇದಕ್ಕೆ ಹೈಬ್ರೀಡ್ ಲೇನ್ ಎಂದು ಹೆಸರಿಡಲಾಗಿದ್ದು, ಫಾಸ್ಟಾ್ಯಗ್ ಲೇನ್​ನಲ್ಲಿ ಹೋಗಲಾಗದ ಭಾರಿ ವಾಹನಗಳು ಇಲ್ಲಿ ಸಂಚರಿಸಲಿವೆ. ನಗದು ನೀಡಿ ಸಂಚರಿಸುವ ವಾಹನಗಳು ಇವುಗಳ ಜತೆಗೆ ಸರದಿಯಲ್ಲಿ ನಿಂತು ಪ್ರಯಾಣಿಸಬೇಕಾಗುತ್ತದೆ. ಫಾಸ್ಟಾ್ಯಗ್ ಹೊಂದಿದ ಭಾರಿ ವಾಹನಗಳಿಗಾಗಿ ಅಲ್ಲಿ ಫಾಸ್ಟಾ್ಯಗ್ ರೀಡರ್ ಇರಲಿದೆ.

ಪಡೆಯುವುದು ಹೇಗೆ

ಐಸಿಐಸಿಐ ಬ್ಯಾಂಕ್, ಎಸ್​ಬಿಐ ಸೇರಿ ಹಲವು ಹಣಕಾಸು ಸಂಸ್ಥೆಗಳಲ್ಲಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿ ಫಾಸ್ಟಾ್ಯಗ್ ಪಡೆಯಬಹುದಾಗಿದೆ. ವಾಹನದ ಚೆಸ್ಸಿ ಸಂಖ್ಯೆ, ನೋಂದಣಿ ಸಂಖ್ಯೆ ಸೇರಿ ಇತರ ಮಾಹಿತಿಗಳನ್ನು ದಾಖಲಿಸಬೇಕಾಗುತ್ತದೆ. ಎಲ್ಲ ಮಾಹಿತಿಗಳು ಚಿಕ್ಕ ಕಾರ್ಡ್ ರೂಪದಲ್ಲಿ ಸಂಗ್ರಹವಾಗಲಿದೆ.

ಕಾರ್ಯ ನಿರ್ವಹಣೆ ಹೇಗೆ?

# ಆನ್​ಲೈನಲ್ಲಿ ನೋಂದಣಿ ಬಳಿಕ ಕಾರ್ಡ್ ಮನೆ ವಿಳಾಸಕ್ಕೆ ಬರಲಿದೆ.

# ಲಾಗ್​ಇನ್, ರೀಚಾರ್ಜ್ ಬಳಿಕ ಕಾರ್ಡ್ ಆಕ್ಟಿವ್ ಆಗಲಿದೆ.

# ಸಂಚಾರ ಆರಂಭಕ್ಕೂ ಮುನ್ನ ವ್ಯಾಲೆಟ್ ಅಥವಾ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು.

# ಪ್ರತಿಯೊಂದು ಟೋಲ್ ಪ್ಲಾಜಾ ದಾಟುವಾಗಲೂ ಖಾತೆಯಿಂದ ನೇರವಾಗಿ ಹಣ ಕಡಿತವಾಗಲಿದೆ.