ರಾಷ್ಟ್ರೀಯ ಬಾಕ್ಸಿಂಗ್ ವೀಕ್ಷಕ ಸ್ಥಾನಕ್ಕೆ ಮೇರಿ ರಾಜೀನಾಮೆ

0
20

ಹಾಲಿ ಕ್ರೀಡಾಪಟುಗಳನ್ನು ರಾಷ್ಟ್ರೀಯ ವೀಕ್ಷಕ ಸ್ಥಾನಕ್ಕೆ ಪರಿಗಣಿಸುವಂತಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಸ್ಪಷ್ಟನೆ ನೀಡಿದ ಬೆನ್ನಲ್ಲಿಯೇ, ಐದು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಬಾಕ್ಸಿಂಗ್​ನ ರಾಷ್ಟ್ರೀಯ ಅಬ್ಸರ್ವರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

‘ರಾಥೋಡ್ ಅವರೊಂದಿಗೆ ಮಾತನಾಡಿ 10 ದಿನಗಳ ಹಿಂದೆ ರಾಷ್ಟ್ರೀಯ ಅಬ್ಸರ್ವರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಈ ಹುದ್ದೆಯನ್ನು ವಹಿಸಿಕೊಳ್ಳುವಂತೆ ನನಗೆ ಮನವಿ ಬಂದಿತ್ತು. ನಾನಾಗಿಯೇ ಈ ಹುದ್ದೆ ಕೇಳಿರಲಿಲ್ಲ’ ಎಂದು ಕಳೆದ ತಿಂಗಳು ಏಷ್ಯನ್ ಚಾಂಪಿಯನ್​ಷಿಪ್​ನಲ್ಲಿ ಸ್ವರ್ಣ ಪದಕ ಜಯಿಸಿದ ಮೇರಿ ಕೋಮ್ ಹೇಳಿದ್ದಾರೆ.

ಹಾಲಿ ಕ್ರೀಡಾಪಟುಗಳು ಈ ಹುದ್ದೆ ವಹಿಸಿಕೊಳ್ಳಬಹುದೇ ಎನ್ನುವ ಗೊಂದಲವಿದ್ದ ಕಾರಣ ನಿಯಮಗಳ ಬಗ್ಗೆ ಆಗ ಕ್ರೀಡಾ ಕಾರ್ಯದರ್ಶಿ ಆಗಿದ್ದ ಇಂಜೆತಿ ಶ್ರೀನಿವಾಸ್​ರನ್ನು ಕೇಳಿದ್ದೆ. ಆದರೆ, ಆಗ ಈ ಹುದ್ದೆಯನ್ನು ನೀವು ಸ್ವೀಕರಿಸಬಹುದು ಎಂದು ಹೇಳಲಾಗಿತ್ತು. ಸಚಿವಾಲಯದ ಮನವಿಯಂತೆ ಈ ಹುದ್ದೆ ವಹಿಸಿಕೊಂಡಿದ್ದೆ ಎಂದು ಹೇಳಿದರು.

ರಾಷ್ಟ್ರೀಯ ಬಾಕ್ಸರ್ ಆಗಿ ಕಣದಲ್ಲಿದ್ದರೂ, ಅಬ್ಸರ್ವರ್ ಹುದ್ದೆಗೇರಿದ್ದು ಸ್ವಹಿತಾಸಕ್ತಿ ಸಂಘರ್ಷದ ವಿವಾದ ಎಬ್ಬಿಸಿತ್ತು. ಕಳೆದ ಮಾರ್ಚ್​ನಲ್ಲಿ ಅಂದಿನ ಕ್ರೀಡಾ ಸಚಿವ ವಿಜಯ್ ಗೋಯೆಲ್, ಒಲಿಂಪಿಕ್ಸ್ ಕಂಚು ವಿಜೇತೆ 35 ವರ್ಷದ ಮೇರಿ ಕೋಮ್ ಸೇರಿದಂತೆ 12 ಕ್ರೀಡಾಪಟುಗಳನ್ನು ಅಬ್ಸರ್ವರ್ ಆಗಿ ನೇಮಿಸಿದ್ದರು. ಮೇರಿ ಅಲ್ಲದೆ, ಡಬಲ್ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಕೂಡ ಕುಸ್ತಿ ವೀಕ್ಷಕರಾಗಿದ್ದು ವಿವಾದಕ್ಕೆ ಕಾರಣವಾಗಿತ್ತು.